
ಹೆಬ್ರಿ : ಕುಚ್ಚೂರು ಕಂಚರ್ಕಳದಲ್ಲಿ ಪುನಾರ್ಮಿಸಬೇಕಾದ ಸೇತುವೆ ಕೆಲಸ ವಿಳಂಬ – ಸಂಪರ್ಕವಿಲ್ಲದೆ 10ಕ್ಕೂ ಹೆಚ್ಚು ಗ್ರಾಮಗಳು ಸಂಕಷ್ಟದಲ್ಲಿ
ಹೆಬ್ರಿ ಸಮೀಪದ ಕೊಲ್ಲೂರು-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕುಚ್ಚೂರು ಕಂಚರ್ಕಳ ಪ್ರದೇಶದಲ್ಲಿರುವ ಕಿರು ಸೇತುವೆ ಹಲವು ವರ್ಷಗಳಿಂದ ಕುಸಿದ ಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಿ ಈ ಭಾಗದಲ್ಲಿ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಾರ್ವಜನಿಕರು ಅನೇಕ ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದು, ಕೊನೆಗೆ ಸುಮಾರು 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
ಆದರೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಗಾಲದ ಸಮಯದಲ್ಲೇ ಕಾಮಗಾರಿ ಆರಂಭವಾಗಿದ್ದು, ಇದೀಗ ಸೇತುವೆ ನಿರ್ಮಾಣ ಪೂರ್ಣಗೊಳ್ಳದೆ ಬಿಟ್ಟಿರುವುದರಿಂದ ಹೆಬ್ರಿಗೆ ಸಂಪರ್ಕ ಹೊಂದಿರುವ ಸುಮಾರು 10 ಗ್ರಾಮಗಳು ತೀವ್ರ ತೊಂದರೆಗೆ ಸಿಲುಕಿವೆ. ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಕಾರ್ಯನಿಮಿತ್ತ ಹೆಬ್ರಿಗೆ ಹೋಗುವವರು ಇದೀಗ 10–12 ಕಿಲೋಮೀಟರ್ ಸುತ್ತಿ ಹೋಗಬೇಕಾದ ಸ್ಥಿತಿ ಉಂಟಾಗಿದೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮಾತನಾಡುತ್ತಾ, “ಇನ್ನೆಲೆ 9 ತಿಂಗಳ ಹಿಂದೆಯೇ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದೆ. ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಎಚ್ಚರಿಸಿದ್ದರೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದರ ಪರಿಣಾಮವಾಗಿ ಜನತೆ ಇದೀಗ ನೊಂದುಕೊಳ್ಳುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನ ಪ್ರತಿಬಿಂಬಿಸಲು ನಾಳೆ ಬೆಳಿಗ್ಗೆ 10:30ಕ್ಕೆ ಹೆಬ್ರಿ ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದೀಗ ಸ್ಥಳೀಯ ಆಟೋ ಚಾಲಕರು, ರೈತರು ಮತ್ತು ಗ್ರಾಮಸ್ಥರು ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.