
ನೀನು ಹೇಗಿದ್ದೀಯಾ? ಗುಡ್ಡೆಗೆ ಬರ್ತೀಯಾ?’ ಎಂದು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 15 ವರ್ಷದ ಬಾಲಕಿಗೆ ಅಸಭ್ಯವಾಗಿ ಮಾತನಾಡಿದ ಮಹೇಶ್ ಭಟ್ ಎಂಬಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಜಾತಿ ನಿಂದನೆಯ ಪ್ರಕರಣ ದಾಖಲಾಗಿದೆ. ಜನವರಿ 12ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಂದು ಬಾಲಕಿ ತನ್ನ ತಂದೆ ಕೆಲಸ ಮಾಡುವ ತೋಟಕ್ಕೆ ಹೋಗಿದ್ದಳು. ಆ ಸಂದರ್ಭದಲ್ಲಿ ತೋಟದ ಮಾಲೀಕ ಮಹೇಶ್ ಭಟ್, ‘ನೀನು ಹೇಗಿದ್ದೀಯಾ? ನಾನು ನಿನಗೆ ಇಷ್ಟವೇ? ಗುಡ್ಡೆಗೆ ಬರ್ತೀಯಾ?’ ಎಂದು ಪ್ರಶ್ನಿಸಿದ್ದಾನೆ. ಆದರೆ ಬಾಲಕಿ ಇದನ್ನು ನಿರಾಕರಿಸಿ ತಕ್ಷಣವೇ ಮನೆಗೆ ಹಿಂತಿರುಗಿದ್ದಾಳೆ. ಈ ಘಟನೆ ಬಗ್ಗೆ ತಾನು ಅನುಭವಿಸಿದ ಅನಾನುಕೂಲವನ್ನು ಪೋಷಕರಿಗೆ ತಿಳಿಸಿದ್ದಾಳೆ.
ಪೋಷಕರು ಕೂಡಲೇ ಪೊಲೀಸರು ಮೊರೆ ಹೋಗಿ ದೂರು ದಾಖಲಿಸಿದ್ದಾರೆ. ಇದೀಗ ವಿಟ್ಲ ಪೊಲೀಸ್ ಠಾಣೆಯಲ್ಲಿ ಮಹೇಶ್ ಭಟ್ ವಿರುದ್ಧ ಪೋಕ್ಸೋ ಮತ್ತು ಜಾತಿಯಿಂದನೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.