
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 15, 2025 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಈ ದಿನ ಧ್ವಜಾರೋಹಣ, ಯಾಗಶಾಲೆ ಪ್ರವೇಶ, ಭೇರಿ ತಾಡನ, ಕೌತುಕ ಬಂಧನ ಹಾಗೂ ನಗರೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ತಿಳಿಸಿದ್ದಾರೆ.
ಮಾರ್ಚ್ 16 ರಿಂದ 21 ರವರೆಗೆ ಪ್ರತಿದಿನ ರಾತ್ರಿ ಮಯೂರ, ಡೋಲಾ, ಪುಷ್ಪಮಂಟಪ, ವೃಷಭ, ಗಜ, ಸಿಂಹ ವಾಹನೋತ್ಸವದ ಪುರಮೆರವಣಿಗೆಗಳು ಓಲಗ ಮಂಟಪದವರೆಗೆ ನಡೆಯಲಿವೆ. ಪ್ರತಿದಿನ ಸಂಜೆ ಕಟ್ಟೆ ಉತ್ಸವ, ಸ್ವರ್ಣಮುಖಿ ರಂಗ ಮಂದಿರದಲ್ಲಿ ದೇಶದ ವಿವಿಧ ಭಾಗಗಳ ಕಲಾವಿದರು ಸೇವಾರೂಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಮಾರ್ಚ್ 22 ರಂದು ಬೆಳಿಗ್ಗೆ 11.15 ಕ್ಕೆ ರಥಾರೋಹಣ ಹಾಗೂ ಸಂಜೆ 4 ಕ್ಕೆ ರಥ ಅವರೋಹಣ ನಡೆಯಲಿದೆ. ಮಾರ್ಚ್ 23 ರಂದು ಓಕುಳಿ ಉತ್ಸವ, ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದ್ದು, ಮಾರ್ಚ್ 24 ರಂದು ಬೆಳಿಗ್ಗೆ 7 ಕ್ಕೆ ಅಶ್ವಾರೋಹಣೋತ್ಸವದಲ್ಲಿ ಶ್ರೀದೇವಿಯನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಕುಳ್ಳಿರಿಸಿ, ಯಾಗಶಾಲೆಯಲ್ಲಿ ಶಾಂತಿ ತತ್ವ ಕಲಾಭಿವೃದ್ಧಿ ಹೋಮದ ಪೂರ್ಣಾಹುತಿ ನೆರವೇರಿಸಲಾಗುವುದು.
ಉತ್ಸವದ ಅವಧಿಯಲ್ಲಿ ದೇವಸ್ಥಾನ ಹಾಗೂ ನಗರವನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗುವುದು. ಭಕ್ತರ ಸೌಲಭ್ಯಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಭಕ್ತರ ಸಹಕಾರದಿಂದ ಪಾನಕ ಹಾಗೂ ಮಜ್ಜಿಗೆ ವಿತರಣೆ ನಡೆಯಲಿದೆ. ನೆರಳಿಗಾಗಿ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗುವುದು. ನೂಕುನುಗ್ಗಲು ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆಯ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಪೊಲೀಸ್ ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳ ಸೇವೆ ಪಡೆಯಲಾಗುವುದು.
ಆರೋಗ್ಯ, ವಸತಿ, ನೈರ್ಮಲ್ಯ, ಊಟೋಪಚಾರ, ನೀರು ಸೇರಿದಂತೆ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕರು, ಸಿಬ್ಬಂದಿಗಳು, ಭಕ್ತರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿವೆ.
ದೇವಸ್ಥಾನದ ಪಾರ್ಕಿಂಗ್ನಲ್ಲಿ ಟೆಂಡರ್ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ, ಷರತ್ತು ಉಲ್ಲಂಘನೆಯ ಕುರಿತು ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಸಮಂಜಸ ಉತ್ತರ ಬಾರದೆ ಇದ್ದಲ್ಲಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.
ಪ್ರವೇಶ ದ್ವಾರದ ನಿರ್ವಹಣೆಯನ್ನು ದೇವಸ್ಥಾನದ ಹೊರ ಗುತ್ತಿಗೆಯ ಸಿಬ್ಬಂದಿಗಳ ಜೊತೆಗೆ ಸ್ಥಳೀಯ ಖಾಸಗಿ ಲಾಡ್ಜ್ ಒಂದರ ಸಿಬ್ಬಂದಿಗಳು ಮಾಡುತ್ತಿರುವ ಬಗ್ಗೆ ಸಾರ್ವಜನಿಕ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಜಿಲ್ಲಾಡಳಿತದ ಅನುಮತಿ ಪಡೆದುಕೊಂಡು ಪ್ರವೇಶ ದ್ವಾರದ ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದಲೇ ನಡೆಸಲು ಪ್ರಯತ್ನಿಸಲಾಗುವುದು ಎಂದು ಕೆ.ಬಾಬು ಶೆಟ್ಟಿ ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸಿಬ್ಬಂದಿ ಸಂತೋಷ್ ಕೊಠಾರಿ ಸ್ವಾಗತಿಸಿದರು.