
ಉಡುಪಿ, ಮಲ್ಪೆ: ಮಲ್ಪೆ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಶಿಶುವಿನ ತಾಯಿಯನ್ನು ಗುರುತಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಏಪ್ರಿಲ್ 14 ರಂದು ಮಲ್ಪೆ ಜಂಕ್ಷನ್ ಬಳಿ ಇರುವ ಜಾಮಿಯಾ ಮಸೀದಿಗೆ ಸೇರಿರುವ ಕಟ್ಟಡದ ಶೌಚಾಲಯದಲ್ಲಿ ಶಿಶುವಿನ ಮೃತದೇಹ ಪತ್ತೆಯಾಯಿತು. ಶೌಚಾಲಯದ ಗೋಡೆಯ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದು, ಈ ಬಗ್ಗೆ ಮಸೀದಿಯ ವ್ಯವಸ್ಥಾಪಕರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ತನಿಖೆಯಲ್ಲಿ ಶಿಶು ಕಾಪು ಮೂಲದ ಅಫೀನಾ ಎಂಬ ಮಹಿಳೆಯದ್ದು ಎಂದು ಪತ್ತೆಯಾಗಿದೆ. ಈಕೆ ಈಗಾಗಲೇ ಒಬ್ಬ ಮಗುವಿನ ತಾಯಿಯಾಗಿದ್ದು, 7-8 ತಿಂಗಳ ಗರ್ಭವತಿಯಾಗಿದ್ದರು. ವೈದ್ಯಕೀಯ ನೆರವಿಲ್ಲದೇ ಗರ್ಭಪಾತದ ಪ್ರಯತ್ನ ಮಾಡಿದ ಬಳಿಕ, ಗರ್ಭದ ಬಡಿದ ನೋವಿನಿಂದ ಬಳಲುತ್ತಿದ್ದ ವೇಳೆ ಮಸೀದಿಯ ಶೌಚಾಲಯದಲ್ಲಿ ಶಿಶುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದೆ.
ಜನ್ಮವಾದ ನಂತರ ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿರುವುದಾಗಿ ಅವರ ಸ್ವಇಚ್ಛ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ಇನ್ನು, ಈ ಮಗು ಬೇರೆಯವರದ್ದೆಂದು ತಿಳಿಸುವ ಅನುಮಾನಾಸ್ಪದ ಆಡಿಯೋ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ. ಅರುಣ್ ಹೇಳಿದರು.