
ಮಂಗಳೂರು:
ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಂದ ಸುಮಾರು 44 ಲಕ್ಷ ರೂ. ವಂಚನೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರೊಂದಿಗೆ ಸಂಪರ್ಕ ಸ್ಥಾಪಿಸಿ, ಇಂಟ್ರಾ ಟ್ರೇಡಿಂಗ್ ಹಾಗೂ ಸ್ಟಾಕ್ ಮಾರ್ಕೆಟ್ ಕುರಿತು ಮಾಹಿತಿಯನ್ನು ನೀಡಿದ್ದ. ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಎಂದು ಹೇಳಿ ಆಕರ್ಷಿಸಿದ್ದ.
ಆದಿಯಲ್ಲಿ ದೂರುದಾರರು ಹೂಡಿಕೆಗೆ ನಿರಾಕರಿಸಿದ್ದರೂ, ಆತನ ನಿರಂತರ ಒತ್ತಡಕ್ಕೆ ಒಳಗಾಗಿ ಹಂತ ಹಂತವಾಗಿ ಸುಮಾರು 44 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಪ್ರಾರಂಭದಲ್ಲಿ ಸಣ್ಣ ಮೊತ್ತವನ್ನು ಲಾಭದ ರೂಪದಲ್ಲಿ ದೂರುದಾರರಿಗೆ ಹಿಂದಿರುಗಿಸಿದ್ದರು.
ಆದರೆ ನಂತರದ ದಿನಗಳಲ್ಲಿ ಬಾಕಿ ಇರುವ ಹಣವನ್ನು ವಾಪಸ್ಸು ಕೇಳಿದಾಗ, ಮತ್ತಷ್ಟು ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಈ ವೇಳೆ ಅನುಮಾನಕ್ಕೆ ಒಳಗಾದ ದೂರುದಾರರು ಸ್ನೇಹಿತರೊಂದಿಗೆ ವಿಚಾರಣೆ ನಡೆಸಿದಾಗ ವಂಚನೆ ಆಗಿರುವುದು ತಿಳಿದು ಬಂದಿದೆ. ತಕ್ಷಣವೇ ಸೆನ್ ಠಾಣೆಗೆ ದೂರು ನೀಡಿದ್ದಾರೆ.