
ಮಂಗಳೂರು: ಕುಡುಪು ದೈವಸ್ಥಾನ ಸಮೀಪ ಆತಂಕಕಾರಿ ಗುಂಪು ಹತ್ಯೆ ಪ್ರಕರಣ – 15 ಮಂದಿ ವಶಕ್ಕೆ
ಮಂಗಳೂರಿನ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ 25ರಿಂದ 30 ಜನರ ಗುಂಪು ಒಬ್ಬ ಅಪರಿಚಿತ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದು, 15 ಮಂದಿಯನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದಾರೆ.
ವಶಕ್ಕೆ ಪಡೆದವರಲ್ಲಿ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೇಶ್ ಕುಮಾರ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಆಲ್ವಾರೀಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಷ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರು ಸೇರಿದ್ದಾರೆ.
ಏಪ್ರಿಲ್ 27ರಂದು ಸಂಜೆ 5:30ರ ಹೊತ್ತಿಗೆ ಮೃತದೇಹವೊಂದು ದೈವಸ್ಥಾನದ ಸಮೀಪದ ಮೈದಾನದಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲಾಯಿತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮೃತನ ಬೆನ್ನಿಗೆ ತೀವ್ರ ಹೊಡೆತ ಬಿದ್ದಿದ್ದು, ಇದರಿಂದ ಉಂಟಾದ ರಕ್ತಸ್ರಾವ ಮತ್ತು ಶಾಕ್‌ಗೆ ಸಿಕ್ಕಿ ಚಿಕಿತ್ಸೆ ಸಿಗದ ಕಾರಣ ಮೃತ್ಯು ಸಂಭವಿಸಿದೆ ಎಂದು ತಿಳಿದುಬಂದಿದೆ.
ದಿನದ ಮಧ್ಯಾಹ್ನ 3 ಗಂಟೆಗೆ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಸಚಿನ್ ಎಂಬಾತನೊಂದಿಗೆ ಮೃತ ವ್ಯಕ್ತಿಗೆ ಮಾತಿನ ಚಕಮಕಿ ಉಂಟಾಗಿದ್ದು, ಬಳಿಕ ಸಹಿತ ಗಲಾಟೆ ನಡೆದಿದೆ. ಬಳಿಕ ಗುಂಪುಆಕ್ರಮಣಕ್ಕೆ ಗುರಿಯಾಗಿದ ಮೃತ ವ್ಯಕ್ತಿಗೆ ಕೈಯಿಂದ, ಕಟ್ಟಿಗೆಯಿಂದ ಹೊಡೆದು ಹಾಗೂ ಕಾಲಿನಿಂದ ತುಳಿದು ಹಲ್ಲೆ ನಡೆಸಲಾಗಿದೆ. ಕೆಲವರು ಮಧ್ಯೆ ಹಸ್ತಕ್ಷೇಪದ ಪ್ರಯತ್ನ ಮಾಡಿದರೂ ಹಲ್ಲೆ ತಡೆಯಲಾಗಲಿಲ್ಲ.
ಈ ಸಂಬಂಧ ದೀಪಕ್ ಕುಮಾರ್ ಎಂಬವರು 19 ಮಂದಿ ಸೇರಿದಂತೆ ಇನ್ನಿತರರ ವಿರುದ್ಧ ದೂರು ನೀಡಿದ್ದು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 37/2025 ಮತ್ತು BNS, 2023 ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಗುಂಪು ಹತ್ಯೆಯ ಪ್ರಕರಣವಾಗಿ ಮಂಗಳೂರಿನಲ್ಲಿ ಇದು ಮೊದಲ ಬಾರಿಗೆ ಹೊಸ ಭಾರತೀಯ ದಂಡ ಸಂಹಿತೆ (BNS, 2023) ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ. ಆರೋಪಿಗಳ ಸಂಖ್ಯೆ 25 ಕ್ಕೂ ಅಧಿಕವಾಗುವ ಸಾಧ್ಯತೆ ಇದ್ದು, ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹತ್ಯೆಯ ಜೊತೆಗೆ ಒಂದು ಮಾಜಿ ಕಾರ್ಪೊರೇಟರ್ ಪತಿಯ ಹೆಸರು ಈ ಪ್ರಕರಣದೊಂದಿಗೆ ಹೊರಹೊಮ್ಮಿದ್ದು, ಈ ದೃಷ್ಟಿಯಿಂದಲೂ ತನಿಖೆ ಮುಂದುವರೆದಿದೆ.