
ಬೆಂಗಳೂರು: ಬಾರ್‌ನಲ್ಲಿ ನಿಧಾನವಾಗಿ ಮಾತನಾಡುವಂತೆ ಸೂಚನೆ ನೀಡಿದ್ದ ವ್ಯಕ್ತಿಯನ್ನು ಹಿಂಬಾಲಿಸಿ, ಆತನ ಮನೆಯಲ್ಲಿಯೇ ಪತ್ನಿಯ ಎದುರು ಚಾಕು ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ಶುಕ್ರವಾರ ರಾತ್ರಿ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ನಡೆದಿದೆ. ಮೃತ ಸುರೇಶ್ (30) ಸ್ಥಳೀಯ ನಿವಾಸಿ.
ಆರೋಪಿ ಕಾಂತರಾಜು ಹಾಗೂ ಅವರೊಂದಿಗೆ ಇದ್ದ ತಂಡದವರಿಂದ ಈ ದಾರುಣ ಹತ್ಯೆ ನಡೆಯಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಶೋಧ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ: ಸುರೇಶ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಏ.25ರ ರಾತ್ರಿ ಸ್ನೇಹಿತರೊಂದಿಗೆ ಶ್ಯಾನುಭೋಗನಹಳ್ಳಿ ಬಳಿ ಇರುವ ತರಂಗಿಣಿ ಬಾರ್‌ಗೆ ಮದ್ಯಪಾನಕ್ಕೆ ತೆರಳಿದ್ದರು. ಇದೇ ಬಾರ್‌ನಲ್ಲಿ ಕಾಂತರಾಜು ಮತ್ತು ಅವರ ಗೆಳೆಯರು ಜೋರಾಗಿ ಮಾತುಕತೆ ನಡೆಸುತ್ತಾ ಮದ್ಯ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಸುರೇಶ್ ಅವರಿಗೆ ನಿಧಾನವಾಗಿ ಮಾತನಾಡುವಂತೆ ವಿನಂತಿಸಿದ್ದರು.
ಇದರಿಂದ ಉಂಟಾದ ವಾದವು ತಳ್ಳಾಟಕ್ಕೆ ತಿರುಗಿ, ನಂತರ ಸುರೇಶ್ ಬಾರ್ ಬಿಟ್ಟು ತಮ್ಮ ಮನೆಗೆ ತೆರಳಿದ್ದರು. ಆದರೆ, ಕಾಂತರಾಜು ತಂಡ ಸುರೇಶ್ ಅವರನ್ನು ಹಿಂಬಾಲಿಸಿ, ಅವರ ಮನೆಗೆ ನುಗ್ಗಿ ಪತ್ನಿಯ ಸಮ್ಮುಖದಲ್ಲೇ ಹೊಟ್ಟೆ ಮತ್ತು ಎದೆ ಭಾಗದಲ್ಲಿ ಚಾಕು ಇರಿದು ಹತ್ಯೆ ಮಾಡಿದರು.
ಘಟನೆ ನಂತರ ಕೂಡಲೇ ಸುರೇಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಕುಮಾರ್, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಮತ್ತು ಬನ್ನೇರುಘಟ್ಟ ಇನ್‌ಸ್ಪೆಕ್ಟರ್ ಕೃಷ್ಣ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣವನ್ನು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.