
ಮುಂಬೈ : ಉಡುಪಿ ಜಿಲ್ಲೆಯ ಎಣ್ಣೆಹೊಳೆ ಗ್ರಾಮದವರಾದ ಮುಂಬೈ ಪೊಲೀಸ್ ಅಧಿಕಾರಿ, ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿದ್ದ ದಯಾ ನಾಯಕ್ ಅವರು ನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತಿಗೆ ಒಂದು ದಿನ ಮುಂಚೆ ಅವರನ್ನು ಸಹಾಯಕ ಪೊಲೀಸ್ ಆಯುಕ್ತರಾಗಿ ಬಡ್ತಿ ನೀಡಲಾಗಿದೆ. 80ಕ್ಕೂ ಹೆಚ್ಚು ಎನ್ಕೌಂಟರ್ಗಳನ್ನು ನಡೆಸಿ ಖ್ಯಾತಿ ಗಳಿಸಿದ್ದ ದಯಾ ನಾಯಕ್ ಅವರು ವಿವಾದಗಳಿಂದಲೂ ದೂರವಿರಲಿಲ್ಲ. ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಅವರು ಬಂಧನಕ್ಕೂ ಒಳಗಾಗಿದ್ದರು. ಆದರೆ, ಸಾಕ್ಷ್ಯಗಳ ಕೊರತೆಯಿಂದಾಗಿ ಬಿಡುಗಡೆ ಹೊಂದಿದ್ದರು.
1995ರಲ್ಲಿ ಬಾಂಬೆ ಪೊಲೀಸ್ ಇಲಾಖೆಯಲ್ಲಿ ತರಬೇತುದಾರರಾಗಿ ಸಬ್-ಇನ್ಸ್ಪೆಕ್ಟರ್ ಹುದ್ದೆಯನ್ನು ಸ್ವೀಕರಿಸಿದ್ದ ದಯಾ ನಾಯಕ್, ತರಬೇತಿಯ ನಂತರ 1996ರಲ್ಲಿ ಜುಹು ಪೊಲೀಸ್ ಠಾಣೆಗೆ ನಿಯೋಜಿತರಾದರು. ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದಲ್ಲೇ, 1996ರ ಡಿಸೆಂಬರ್ 31ರಂದು ರಾತ್ರಿ ದರೋಡೆಕೋರರ ಮೇಲೆ ಗುಂಡು ಹಾರಿಸಿ ತಮ್ಮ ಮೊದಲ ಎನ್ಕೌಂಟರ್ ನಡೆಸಿದ್ದರು. ಇದರ ನಂತರ ಅವರಿಗೆ “ಎನ್ಕೌಂಟರ್ ದಯಾ ನಾಯಕ್” ಎಂಬ ಹೆಸರು ಬಂದಿತು.
ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರನ್ನು ಸಹಾಯಕ ಪೊಲೀಸ್ ಆಯುಕ್ತರಾಗಿ ಮಂಗಳವಾರ ಬಡ್ತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ ಪ್ರಕಾರ, ಜೀವನ್ ಖರತ್, ದೀಪಕ್ ದಳವಿ ಮತ್ತು ಪಾಂಡುರಂಗ ಪವಾರ್ ಅವರನ್ನು ಸಹ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
ದಯಾ ನಾಯಕ್ 1995ರಲ್ಲಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಬಾಂದ್ರಾ ಘಟಕದ ಅಪರಾಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜೀವನದ ಬಗ್ಗೆ ಚಲನಚಿತ್ರವೂ ನಿರ್ಮಾಣವಾಗಿದೆ. 2006ರಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿತ್ತಾದರೂ, ನಂತರ ಅವರಿಗೆ ಕ್ಲೀನ್ ಚಿಟ್ ದೊರಕಿತ್ತು. ದಯಾ ನಾಯಕ್ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ (ATS) ಸಹ ಕಾರ್ಯನಿರ್ವಹಿಸಿದ್ದಾರೆ.
ನಾಳೆ ದಯಾ ನಾಯಕ್ ಅವರು ನಿವೃತ್ತರಾಗಲಿದ್ದಾರೆ. ವೈಯಕ್ತಿಕ ಜೀವನದಲ್ಲಿ ಏನೇ ಸಂಘರ್ಷಗಳು ಇದ್ದರೂ, ನಿವೃತ್ತ ಜೀವನ ಶಾಂತಿಯುತವಾಗಿ, ಸುಖಕರವಾಗಿ ಕಳೆಯಲಿ ಎಂಬ ಕೋರಿಕೆ.