
ಕುಂದಾಪುರ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ – ಯುವಕ ಸ್ಥಳದಲ್ಲೇ ಸಾವು
ಕುಂದಾಪುರ ತಾಲೂಕು ಹೆಮ್ಮಾಡಿ–ವಂಡ್ಸೆ ರಸ್ತೆಯ ಮಲ್ಲಾರಿ ಬಳಿ ಜೂನ್ 16ರಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಬೈಕ್ ಸಂಪೂರ್ಣವಾಗಿ ಬೆಂಕಿಗೇರಿದ್ದು ಸುಟ್ಟು ಕರಕಲಾಗಿದೆ.
ಮೃತಪಟ್ಟ ಸವಾರನನ್ನು ಸಿಗಂದೂರಿನ ಶರತ್ (25) ಎಂದು ಗುರುತಿಸಲಾಗಿದೆ. ಶರತ್ ಅವರು ಸಿಗಂದೂರಿನಿಂದ ಕುಂದಾಪುರದ ಬಳಿಯ ಸಂಬಂಧಿಕರ ಮನೆಗೆ ಬೈಕ್ನಲ್ಲಿ ಬರುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿದೆ.
ಕೆಂಚನೂರು ಮಲ್ಲಾರಿ ತಿರುವಿನಲ್ಲಿ ಬೈಕ್ನ ನಿಯಂತ್ರಣ ತಪ್ಪಿ, ಎದುರಿನಿಂದ ಬರುತ್ತಿದ್ದ ಶ್ರೀ ದುರ್ಗಾಂಬಾ ಖಾಸಗಿ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಬೈಕ್ ಬೆಂಕಿಗೆ ಆಹುತಿಯಾಗಿದ್ದು ಸಂಪೂರ್ಣವಾಗಿ ಕರಕಲಾಗಿದ್ದು, ಭೀಕರ ದೃಶ್ಯ ಕಂಡುಬಂದಿತು.
ಕುಂದಾಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.