
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲ. ಪಹಲ್ಗಾಮ್‌ನಲ್ಲಿ 28 ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ಕ್ರಮಗಳನ್ನು ಆರಂಭಿಸಿದೆ. ಆದರೆ ಈ ನಡುವೆ ಮತ್ತೊಂದು ದುಃಖದ ಘಟನೆ ನಡೆದಿದ್ದು, ಉಗ್ರರು ಮತ್ತೊಬ್ಬ ನಾಗರಿಕನ ಹತ್ಯೆ ಮಾಡಿದ್ದಾರೆ.
ಭಾನುವಾರ, ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರು ಒಂದು ಸಾಮಾಜಿಕ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೂ ಮುನ್ನ ಅವರು ಪ್ರಾಣ ಬಿಟ್ಟರು.
ಪಾಕಿಸ್ತಾನದ ಬೆಂಬಲಿತ ಉಗ್ರರಿಗೆ ಕಾಶ್ಮೀರದ ಸ್ಥಳೀಯ ಪರಿಸರದ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಅಲ್ಲಿನ ಕೆಲವು ಮನೆಗಳಲ್ಲಿ ಅವರಿಗೆ ಆಶ್ರಯ ಸಿಗುತ್ತಿದೆ ಮತ್ತು ಆಹಾರ ವ್ಯವಸ್ಥೆಯೂ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತ್ತೀಚಿನ ಹತ್ಯೆ ಈ ಮಾತಿಗೆ ಮತ್ತಷ್ಟು ಬಲ ನೀಡುವಂತಾಗಿದೆ. ಉಗ್ರರು ಸಾಮಾಜಿಕ ಕಾರ್ಯಕರ್ತನ ಮನೆಗೆ ನುಗ್ಗಿ ದಾಳಿ ನಡೆಸಿದ ರೀತಿಯು, ಸ್ಥಳೀಯರ ಬೆಂಬಲವಿಲ್ಲದೇ ಸಾಧ್ಯವಿಲ್ಲ ಎಂಬ ಶಂಕೆ ಹುಟ್ಟಿಸುತ್ತದೆ.
ಹತ್ಯೆಗೀಡಾದ ಸಾಮಾಜಿಕ ಕಾರ್ಯಕರ್ತನನ್ನು ಗುಲಾಮ್ ರಸೂಲ್ ಮಗ್ರೆ ಎಂದು ಗುರುತಿಸಲಾಗಿದೆ. ಅವರ ಹತ್ಯೆಗೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ.