
ಬೆಂಗಳೂರು: ಬಿಬಿಎಂಪಿ ಕಸದ ಲಾರಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾದ ಮಹಿಳೆ ಶವವು ಎಲ್ಲರಲ್ಲೂ ಕುತೂಹಲ ಕೆರಳಿಸಿತ್ತು. ಇದೀಗ ಪೊಲೀಸರು ನಡೆಸಿದ ತನಿಖೆಯಿಂದ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ.
ಮೃತ ಮಹಿಳೆಯನ್ನು ಆಶಾ (32) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಮೊಹಮ್ಮದ್ ಶಂಸುದ್ದೀನ್ (33) ಆಕೆಯನ್ನು ಹತ್ಯೆ ಮಾಡಿ ಬಿಬಿಎಂಪಿ ಕಸದ ತೊಟ್ಟಿಗೆ ಎಸೆದಿದ್ದಾನೆ ಎಂಬುದು ಪೊಲೀಸರು ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.
ಮಹಿಳೆಯನ್ನು ಕೊಂದಿರುವ ವ್ಯಕ್ತಿಯೇ ಆಕೆಯ ಜೊತೆಯಲಿ ಸಹಬಾಳ್ವೆ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ. ಅಸ್ಸಾಂ ಮೂಲದ ಶಂಸುದ್ದೀನ್ ಮತ್ತು ಆಶಾ ಇಬ್ಬರೂ ಲಿವ್ ಇನ್ ಸಂಬಂಧದಲ್ಲಿ ಇದ್ದರು.
ಇವರು ಹುಲಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಒಂದೇ ಮನೆನಲ್ಲಿ ವಾಸಿಸುತ್ತಿದ್ದರು. ಆಶಾ ರಾತ್ರಿ ಇಡೀ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು ಎಂಬ ಅನುಮಾನ ಶಂಸುದ್ದೀನ್ ತಲೆಗೆ ಬಿದ್ದು, ಈ ಕಾರಣದಿಂದ ಜಗಳವಾಯಿತು. ಜಗಳದ ವೇಳೆ ಆರೋಪಿ ಆಶಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಆಶಾ ಈಗಾಗಲೇ ಮದುವೆಯಾಗಿದ್ದವರು, ಗಂಡನನ್ನು ಕಳೆದುಕೊಂಡು, ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸಿಸುತ್ತಿದ್ದರು. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಆಶಾ, ಸೇವೆ ನೀಡುತ್ತಿದ್ದ ಸಂಸ್ಥೆಯ ಸೆಕ್ಯೂರಿಟಿ ಗಾರ್ಡಾಗಿ ಕೆಲಸ ಮಾಡುತ್ತಿದ್ದ ಶಂಸುದ್ದೀನ್ ಜೊತೆ ಪರಿಚಯವಾಗಿತ್ತು.
ಆರೋಪಿ ಶಂಸುದ್ದೀನ್ ಕೂಡ ಮದುವೆಯಾದ ವ್ಯಕ್ತಿಯಾಗಿದ್ದಾನೆ ಎನ್ನಲಾಗಿದೆ.
ಚೆನ್ನಮ್ಮ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಶವ ಪತ್ತೆಯಾದಿದ್ದು, ಘಟನೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಆರೋಪಿ ಶಂಸುದ್ದೀನ್ ಅನ್ನು ಬಂಧಿಸಿದ್ದಾರೆ. ಇದೀಗ ತನಿಖೆ ಮುಂದುವರೆದಿದೆ.