
ಸಿಂಗಾಪುರ್ ಮತ್ತು ಹಾಂಕಾಂಗ್ನಲ್ಲಿ ಕೊರೋನಾ ವೈರಸ್ನ ಹೊಸ ತಳಿಗಳ ಸೋಂಕು ಹೆಚ್ಚು ಪ್ರಕರಣಗಳೊಂದಿಗೆ ಹರಡುತ್ತಿದೆ. ಈ ತಳಿಯು ಈಗ ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕದಲ್ಲಿ ಈಗಾಗಲೇ 8 ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿ ನಂಬದಾರ ಮೂಲಗಳಿಂದ ಲಭಿಸಿದೆ. ಭಾರತದಲ್ಲಿ ಒಟ್ಟು 257 ಪ್ರಕರಣಗಳು ದೃಢಪಟ್ಟಿದ್ದು, ಇದು ಹೊಸ ಕೊರೋನಾ ಅಲೆಯ ಪ್ರಾರಂಭದ ಸೂಚನೆಯಾಗಿರಬಹುದು.
ಈ ಹೊಸ ಅಲೆ ಅಡಿಯಲ್ಲಿ, ಕೇರಳದಲ್ಲಿ 69, ಮಹಾರಾಷ್ಟ್ರದಲ್ಲಿ 44, ತಮಿಳುನಾಡಿನಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೆ, ಗುಜರಾತ್, ದೆಹಲಿ, ಹರ್ಯಾಣ, ರಾಜಸ್ಥಾನ ಮತ್ತು ಸಿಕ್ಕಿಂ ನಲ್ಲಿಯೂ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಆದರೂ ಸದ್ಯ ಯಾವುದೇ ಗಂಭೀರ ಲಕ್ಷಣಗಳು ಗೋಚರಿಸುತ್ತಿಲ್ಲ. ಪರಿಣಾಮವಾಗಿ ಆತಂಕಕ್ಕೆ ಕಾರಣವಿಲ್ಲದಿದ್ದರೂ, ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದೆ ಮತ್ತು ರಾಜ್ಯದಾದ್ಯಂತ ಮಾಹಿತಿ ರವಾನಿಸಿದೆ.
ಸಿಂಗಾಪುರದಲ್ಲಿ ಈಗಾಗಲೇ ಅಲರ್ಟ್ ಘೋಷಣೆ ನೀಡಲಾಗಿದ್ದು, ಮೇ 3ರಿಂದ 16ರವರೆಗೆ 14,200 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಏಷ್ಯಾದ ಹಲವೆಡೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಸಿಂಗಾಪುರ ಮತ್ತು ಹಾಂಗ್ಕಾಂಗ್ನ ನಂತರ ಭಾರತದಲ್ಲೂ ಹರಡುವ ಅಪಾಯವಿದೆ. ಈ ಬಾರಿ ಪತ್ತೆಯಾಗಿರುವ ಎಲ್ಎಫ್.7 ಮತ್ತು ಎನ್ಬಿ.1.8 ತಳಿಗಳು, ಜೆಎನ್.1 ತಳಿಗೆ ಸೇರಿದವು ಎಂಬುದು ವೈದ್ಯಕೀಯ ತಜ್ಞರ ಮಾಹಿತಿ.