March 19, 2025
dc

ಉಡುಪಿ: ಉಡುಪಿ ಜಿಲ್ಲೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ನೈಸರ್ಗಿಕ ಸೌಂದರ್ಯ, ಪೌರಾಣಿಕ ಕ್ಷೇತ್ರಗಳು, ಕಡಲತೀರ ಹಾಗೂ ಜಲಕ್ರೀಡೆಗಳಿಗಾಗಿ ಹೆಸರಾಗಿರುವ ಈ ಜಿಲ್ಲೆಯಲ್ಲಿ ಪ್ರವಾಸಿಗರ ಸುರಕ್ಷತೆ ಎಂಬುದು ಅತ್ಯಂತ ಮುಖ್ಯವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ, ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಸರ್ಕಾರದಿಂದ ನೀಡಲಾಗಿರುವ ಮಾರ್ಗಸೂಚಿಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಉದ್ದೇಶದಿಂದ, ಮಾರ್ಚ್ 20 ರಂದು ಬೆಳಿಗ್ಗೆ 10.30 ಕ್ಕೆ ಉಡುಪಿ ಜಿಲ್ಲೆಯ ಮಣಿಪಾಲದ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ.

ಈ ಸಭೆಗೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ ಸ್ಟೇ, ರೆಸಾರ್ಟ್ಸ್, ಹೌಸ್ ಬೋಟ್, ಪ್ರವಾಸಿ ಬೋಟ್, ಹಾಗೂ ಕಯಾಕ್ ಸೇವೆಗಳನ್ನು ನಿರ್ವಹಿಸುತ್ತಿರುವ ಮಾಲೀಕರು (ನೋಂದಾಯಿತ ಮತ್ತು ನೋಂದಾಯಿತವಲ್ಲದ) ಹಾಜರಾಗಬೇಕೆಂದು ಜಿಲ್ಲಾಡಳಿತದಿಂದ ತಿಳಿಸಲಾಗಿದೆ. ಸಭೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದ ನಿಬಂಧನೆಗಳು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ರಿಜಿಸ್ಟ್ರೇಷನ್ ಪ್ರಕ್ರಿಯೆಗಳ ನಿರ್ವಹಣೆ, ಹಾಗೂ ಸೇವೆಗಳ ಗುಣಮಟ್ಟ ಸುಧಾರಣೆಗೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು, ಈ ಸಭೆಯಲ್ಲಿ ಎಲ್ಲಾ ಸಂಬಂಧಿತ ಸೇವಾ ಒಡಂಬಡಿಕೆದಾರರು ಭಾಗವಹಿಸಿ, ನಿರ್ದಿಷ್ಟ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಕಡ್ಡಾಯ ಸೂಚನೆ ನೀಡಿದ್ದು, ಸಭೆಗೆ ಎಲ್ಲರೂ ನಿರ್ಬಂಧವಿಲ್ಲದೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.