
ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ವೇತುವೆ ಕಾಮಗಾರಿಯ ವಿಳಂಬವನ್ನು ವಿರೋಧಿಸಿ, ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಏಪ್ರಿಲ್ 1 ರಂದು ವಿಶೇಷ ಪ್ರತಿಭಟನೆಯನ್ನು ಆಯೋಜಿಸಿದೆ. ಈ ಬಗ್ಗೆ ಸಮಿತಿ ಪ್ರಧಾನ ಸಂಚಾಲಕ ಅಮೃತ್ ಶೆಣೈ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೈಲ್ವೇ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಕೋಟ ಶ್ರೀನಿವಾಸ ಪೂಜಾರಿ ಕಳೆದ 9 ವರ್ಷಗಳಿಂದ ಸೇತುವೆ ನಿರ್ಮಾಣದ ಬಗ್ಗೆ ಅನೇಕ ದಿನಾಂಕಗಳನ್ನು ಘೋಷಿಸಿ, ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳಿಲ್ಲ. ಈ ಹಿನ್ನೆಲೆ, ಏಪ್ರಿಲ್ 1 (ಎಪ್ರಿಲ್ ಫೂಲ್ ದಿನ) ಅನ್ನು ಜನತೆ ಸಾಕಷ್ಟು ಬಾರಿ ಮೋಸಹೋಗಿರುವ ದಿನವೆಂದು ಗುರುತಿಸಿ, ಅದೇ ದಿನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿಭಟನೆ ಅರ್ಥಪೂರ್ಣವಾಗಿಸಲು ಮಧ್ಯಾಹ್ನ 2.30ಕ್ಕೆ ಕಲ್ಸಂಕದಿಂದ ಇಂದ್ರಾಳಿ ತನಕ ಬೃಹತ್ ಜಾಥಾ ನಡೆಯಲಿದೆ. ಈ ಜಾಥಾದಲ್ಲಿ ಸೇತುವೆ ಮಾದರಿಯ ಟ್ಯಾಬ್ಲೋ ಕೂಡಾ ಇರಲಿದೆ. ಕಾಮಗಾರಿಗೆ ಹಣದ ಕೊರತೆಯಿದ್ದರೆ, ಕೇಂದ್ರ ಸರ್ಕಾರಕ್ಕೆ ಅಗತ್ಯ ಹಣ ಒದಗಿಸಲು ಸಮಿತಿಯ ಸದಸ್ಯರು ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರಾದ ಮಹಾಬಲ ಕುಂದರ್, ಕುಶಾಲ್ ಶೆಟ್ಟಿ, ಹರಿಪ್ರಸಾದ್ ರೈ ಹಾಗೂ ಸದಸ್ಯರಾದ ಅನ್ಸಾರ್ ಅಹಮದ್, ಮೀನಾ ಬನ್ನಂಜೆ, ಅಬ್ದುಲ್ ಅಜೀಝ್ ಮೊದಲಾದವರು ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.