
ಮದ್ದೂರು:
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ದುರ್ಘಟನೆಯೊಂದು ನಡೆದಿದೆ. ಶಾಲಾ ಶುಲ್ಕ ಪಾವತಿಸದ ಕಾರಣ ಶಾಲಾ ಆಡಳಿತ ಮಂಡಳಿ ನೀಡಿದ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅನಿಕೇತನ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದ 15 ವರ್ಷದ ಎಚ್.ಎಲ್. ಮಿಲನಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈ ಗ್ರಾಮದ ಲಕ್ಷ್ಮಿಪ್ರಸಾದ್ ಮತ್ತು ಎಚ್.ಎಸ್. ರಶ್ಮಿ ದಂಪತಿಯ ಮಗಳು ಮಿಲನಾ, ಜೊತೆಗೆ ಆಕೆಯ ಸಹೋದರಿ ಮೋಹಿತಾ (7ನೇ ತರಗತಿ) ಮತ್ತು ಸಹೋದರ ಮೋಹಿತ್ (3ನೇ ತರಗತಿ) ಸಹ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಮಿಲನಾ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಶಾಲೆಗೆ ಸೇರಿದ್ದರೂ, ಶಾಲೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕಿ ಶೈಲಜಾ ಹಾಗೂ ಮೂವರು ಶಿಕ್ಷಕರು ಮಿಲನಾಳಿಗೆ ಶಾಲಾ ಶುಲ್ಕ ಪಾವತಿಸುವಂತೆ ನಿರಂತರ ಒತ್ತಾಯ ಮಾಡುತ್ತಿದ್ದರಂತೆ. ಇದಲ್ಲದೆ, ಪ್ರತಿ ದಿನ ಶಾಲಾ ಪ್ರಾರ್ಥನೆಗೆ ಭಾಗವಹಿಸಲು ಅವಕಾಶ ನೀಡದೆ ಮಿಲನಾಳಿಗೆ ಬಹಿಷ್ಕಾರ ಹಾಕಲಾಗಿತ್ತಂತೆ.
ಶನಿವಾರವೂ ಪ್ರಾರ್ಥನೆಗೆ ಅವಕಾಶ ನೀಡದ school ಆಡಳಿತದ ನಡೆಗೆ ನೊಂದು, ಮಿಲನಾ ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದ ಕೂಡಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರಿದ್ದಾರೆ.
ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ದಲಿತ ಸಂಘಟನೆಗಳ ನಾಯಕರು ಮುಂದಾಗಿದ್ದಾರೆ.