
ಉತ್ತರ ಪ್ರದೇಶದಿಂದ ಮರಳಿದ ಪೊಲೀಸರು: ಬಾಲಕನ ತಂದೆಗೆ ನೋಟಿಸ್ ಜಾರಿ
ಉಡುಪಿ: ನಗರದಲ್ಲಿ ನಡೆದ ನೀಟ್ ನಕಲಿ ಅಂಕಪಟ್ಟಿ ಪ್ರಕರಣದಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ, ಪೊಲೀಸರು ಪ್ರಮುಖ ಆರೋಪಿ ಪತ್ತೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಆದರೆ ಆರೋಪಿಯ ಪತ್ತೆ ಆಗದ ಕಾರಣ, ಪೊಲೀಸರು ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ.
ಸರ್ಕಾರಿ ಅಧಿಕಾರಿ ರೋಶನ್ ಶೆಟ್ಟಿ ಅವರ ಪುತ್ರನು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ‘ಎಡಿಟಿಂಗ್ ಮಾಸ್ಟರ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಕಲಿ ಅಂಕಪಟ್ಟಿಗಳನ್ನು ಹೇಗೆ ತಯಾರಿಸಬಹುದು ಎಂಬ ಮಾಹಿತಿ ನೀಡಲಾಗಿತ್ತು. ಅದರಲ್ಲಿ ಎರಡು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದ್ದು, ಆ ಮೂಲಕ ವಾಟ್ಸ್‌ಆ್ಯಪ್‌ನಲ್ಲಿ ಸಂವಹನ ನಡೆಸಲಾಗಿದೆ. ಆರೋಪಿ ವಿಷು ಕುಮಾರ್ ಮತ್ತು ಇತರರು ನಕಲಿ ಅಂಕಪಟ್ಟಿ ಹಾಗೂ ಒಎಂಆರ್ ಶೀಟ್ ಅನ್ನು ನೀಡುವುದಾಗಿ ಹೇಳಿ ಹಣ ಪಡೆದು, ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿರುವುದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ವಿಷು ಕುಮಾರ್ ಅಥವಾ ವಿಷ್ಣು ಕುಮಾರ್ ಎಂಬ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಪೊಲೀಸರಿಂದ ಸರ್ಕಾರಿ ಅಧಿಕಾರಿ ರೋಶನ್ ಶೆಟ್ಟಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಅವರು ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ. ತನಿಖೆ ಮುಂದುವರೆದಿದೆ.