August 3, 2025
Screenshot_20250722_1443052

ಕಾಪು: ಕೋಳಿ ಅಂಕ ದಾಳಿ – ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೈಪುಂಜಾಲು ಬೀಚ್ ಸಮೀಪ, ಕಾನೂನುಬಾಹಿರವಾಗಿ ಕೋಳಿ ಅಂಕ (ಕೋಳಿ ಜೂಜು) ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಕಾಪು ಪೊಲೀಸರು ಜುಲೈ 21 ರಂದು ಸಂಜೆ ದಾಳಿ ನಡೆಸಿದ್ದಾರೆ.

ದಾಳಿ ವಿವರ:

ಸಂಜೆ 6:00 ಗಂಟೆ ಸುಮಾರಿಗೆ ಬಾತ್ಮಿದಾರರಿಂದ ಬಂದ ಮಾಹಿತಿಯಂತೆ, ಕೈಪುಂಜಾಲು ಗ್ರಾಮದ ಬೀಚ್‌ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಮಂದಿ ಕೋಳಿಗಳ ಕಾಲುಗಳಿಗೆ ಬಾಳು (ಚಿಕ್ಕ ಕತ್ತಿ)ಗಳನ್ನು ಕಟ್ಟಿ, ಹಣ ಪಣವಿಟ್ಟು ಕೋಳಿ ಅಂಕ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ತಕ್ಷಣವೇ ಪಿಎಸ್‌ಐ ತೇಜಸ್ವಿ, ಸಿಬ್ಬಂದಿಗಳಾದ ಉಮೇಶ್, ಮರಿಗೌಡ, ಹರೀಶ್ ಬಾಬು, ಲೋಕೇಶ್ ಹಾಗೂ ಚಾಲಕ ಜಗದೀಶ್ ಅವರೊಂದಿಗೆ ಇಲಾಖಾ ಜೀಪಿನಲ್ಲಿ ಸ್ಥಳಕ್ಕೆ ತೆರಳಿದ್ದಾರೆ.

ಸ್ಥಳೀಯರ ಸಹಕಾರ:

ದಾಳಿ ವೇಳೆ ಸ್ಥಳೀಯರಾಗಿ ಪ್ರತೀಕ್ ಹಾಗೂ ಕಾರ್ತಿಕ್ ಎಸ್‌ ಅವರನ್ನು ಪಂಥಾಯತುದಾರರಾಗಿ ಕರೆದುಕೊಂಡು, ಸ್ಥಳಕ್ಕೆ ಭೇಟಿ ನೀಡಲಾಗಿದೆ. ಬಾಬತಾರೆಯ ಮಾಹಿತಿ ಮೇರೆಗೆ, ಆರೋಪಿಗಳಲ್ಲಿ ಇಬ್ಬರನ್ನು — ವಿಜ್ಜು @ ವಿಜಯ (ಉಳಿಯಾರಗೋಳಿ) ಮತ್ತು ಅನಿಲ್ ಕುಮಾರ್ (ಫಣಿಯೂರು) — ಎಂದು ಗುರುತಿಸಲಾಗಿದೆ. ಇತರರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಆರೋಪಿತರು ಪರಾರಿಯಾದರು:

ಪೊಲೀಸರನ್ನು ಕಂಡು, ಕೋಳಿಗಳು ಹಾಗೂ ಬಳಸುತ್ತಿದ್ದ ಬಾಳುಗಳನ್ನು ಸಮೇತ ಆರೋಪಿತರು ಓಡಿ ಹೋಗಿದ್ದಾರೆ. ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿದರೂ ಸಿಕ್ಕಿಲ್ಲ.

ಸಮಗ್ರ ಮಹಜರು ಹಾಗೂ ವಶಪಡಿಕೆ:

ಪಂಚರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸ್ಥಳದಿಂದ ಒಂದು ಸತ್ತ ಕೋಳಿ, ಒಂದು ಗಾಯಗೊಂಡ ಜೀವಂತ ಕೋಳಿ ಹಾಗೂ ಒಂದು ಕೈಚೀಲವನ್ನು ವಶಪಡಿಸಿಕೊಂಡಿದ್ದಾರೆ.

ಕಾನೂನು ಕ್ರಮ:

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2025ರಲ್ಲಿ ಭಾರತೀಯ ಪ್ರಾಣಿಗಳ ಕ್ರೂರತೆಯ ವಿರುದ್ಧದ ಕಾಯ್ದೆಯ (Prevention of Cruelty to Animals Act) ಸೆಕ್ಷನ್ 11(1)(a)(n) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 87ರಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

error: Content is protected !!