
ಉಡುಪಿ: ಕಳೆದ ಎರಡು ತಿಂಗಳಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹವಾಮಾನ ವೈಪರಿತ್ಯ ತೀವ್ರವಾಗಿ ಪರಿಣಾಮ ಬೀರುತ್ತಿದ್ದು, ಸಣ್ಣಪುಟ್ಟ ದೋಣಿಯ ಮಾಲಕರ ಜೀವನದ ಮೇಲೆ ಗಂಭೀರ ಹೊಡೆತ ಬಿದ್ದಿದೆ. ಕಡಲಲ್ಲಿ ಕಸುಬು ಮಾಡಿ ಬದುಕು ನಡೆಸುವ ಮೀನುಗಾರರು ಈಗ ದಿಕ್ಕು ತೋಚದೆ ದೇವರ ಮೊರೆ ಹೋಗುವ ಸ್ಥಿತಿಗೆ ತಲುಪಿದ್ದಾರೆ.
ಮೇ 15ರಿಂದ ಆರಂಭವಾದ ಹವಾಮಾನ ವೈಪರಿತ್ಯದಿಂದಾಗಿ ಕರಾವಳಿಯಲ್ಲಿ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಿದ್ದು, ಚಂಡಮಾರುತಗಳು ಹಾಗೂ ವಾಯುಭಾರ ಕುಸಿತದ ಪರಿಣಾಮದಿಂದ ಹವಾಮಾನ ಇಲಾಖೆ ಮುನ್ಸೂಚನೆಗಳು ಸಹ ಅಸಮರ್ಪಕವಾಗಿವೆ.

ಸರಕಾರದ ನಿಯಮದ ಪ್ರಕಾರ ಜೂನ್ 1ರಿಂದ ಪುಟ್ಟ ದೋಣಿಗಳ ಮೀನುಗಾರಿಕೆ ಆರಂಭವಾಗಬೇಕಿತ್ತು. ಆದರೆ ಬಿರುಗಾಳಿ, ಅಲೆಗಳ ಭೀತಿಯಿಂದ ಬಹುತೇಕ ದೋಣಿಗಳು ಸಮುದ್ರಕ್ಕಿಳಿಯಲಿಲ್ಲ. ಇಳಿದ ದೋಣಿಗಳಿಗೂ ಕಸುಬು ತೀರ ಎಣಿಕೆಗೆ ಬರದಷ್ಟು ಕಡಿಮೆಯಾಗಿದೆ. ಕೆಲ ಕಡೆ ದೋಣಿಗಳು ಉರುಳಿ ಜೀವಹಾನಿಗೂ ಕಾರಣವಾಗಿವೆ. ಈ ಪರಿಸ್ಥಿತಿಯಲ್ಲಿ ಮೀನುಗಾರರು ಸಹಾಯಕ್ಕಾಗಿ ದೇವರ ಮೊರೆ ಹೋಗಿದ್ದಾರೆ.
ಮಲ್ಪೆ ಸಮೀಪದ ಕಲ್ಮಾಡಿ ಗುಡ್ಡದ ಮೇಲೆ ಬಬ್ಬರ್ಯ ದೈವರಾಜನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಸೇವೆ ನೆರವೇರಿಸಲಾಗಿದೆ. ಜೂನ್ ತಿಂಗಳಲ್ಲಿ ನಿರಂತರ ಚಂಡಮಾರುತ ಹಾಗೂ ಮಳೆಯ ಪರಿಣಾಮವಾಗಿ ಮೀನುಗಳು ಕಡಲ ತೀರ ತಲುಪಲಿಲ್ಲ. ಆಗಸ್ಟ್ 10ರಂದು ನಾಡದೋಣಿ ಮೀನುಗಾರಿಕೆ ಕಾಲಾವಧಿ ಮುಕ್ತಾಯವಾಗಲಿದೆ. ಜುಲೈ ಮಾಧ್ಯದಲ್ಲಿ ಕಸುಬು ನಡೆಯದ ಕಾರಣದಿಂದಾಗಿ ಎಲ್ಲ ನಾಡದೋಣಿ ಮೀನುಗಾರರು ದೇವರ ಆಶೀರ್ವಾದಕ್ಕಾಗಿ ವಿಶೇಷ ಸೇವೆ ಕೈಗೊಂಡಿದ್ದಾರೆ.

ದರ್ಶನ ಸೇವೆಯ ನಂತರ ದೈವದ ಸವಾರಿ ನದಿತೀರದವರೆಗೆ ಪಂಜು ಹಿಡಿದು ಸಾಗಿಸಲಾಯಿತು. ಈ ಸಂದರ್ಭದಲ್ಲಿ ಮೀನುಗಾರರು ಕಡಲದಲ್ಲಿ ಸುರಕ್ಷಿತವಾಗಿ ಉತ್ತಮ ಕಸುಬು ಸಿಗಲೆಂದು ಪ್ರಾರ್ಥಿಸಿದರು. ದೈವದಿಂದ ಅಭಯವೂ ದೊರೆತಿದೆ.
ಇದೀಗ ಅವರು ಮುಂದಿನ 20 ದಿನಗಳಲ್ಲಿ ದೋಣಿಯನ್ನು ಸಮುದ್ರಕ್ಕಿಳಿಸಿ, ಬುಟ್ಟಿಗಳನ್ನು ತುಂಬಾ ಮೀನುಗಳಿಂದ ತುಂಬಿಸಿ ಹೊಟ್ಟೆ ತುಂಬಾ ಊಟ ಮಾಡುವ ಆಸೆಯಲ್ಲಿದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ಪ್ರಬಲವಾಗಿರುವ ಈ ಕಾಲಘಟ್ಟದಲ್ಲೂ ಪುಟ್ಟ ದೋಣಿಗಳ ಮೀನುಗಾರರಿಗೆ ದೈವವೇ ಆಧಾರವಾಗಿದೆ.