
ಮಂಗಳೂರು: ಜುಲೈ 19 ಶನಿವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಮಕ್ಕಳ ಸುರಕ್ಷತಿಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಎರಡು ಪ್ರಮುಖ ತಾಲ್ಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ನಿರ್ಧಾರವು ಮಳೆ ಪರಿಣಾಮದಿಂದ ಮಕ್ಕಳಿಗೆ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಲು ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ.
ಮಂಗಳೂರು ತಾಲ್ಲೂಕಿನಲ್ಲಿ ಅಂಗನವಾಡಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಆದೇಶ ನೀಡಲಾಗಿದೆ. ಇತ್ತ ಬಂಟ್ವಾಳ ತಾಲ್ಲೂಕಿನಲ್ಲಿ ಪ್ರೌಢಶಾಲೆ ಮಟ್ಟದವರೆಗೆ ರಜೆ ಘೋಷಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಂಟ್ವಾಳದಲ್ಲಿ ಈ ಸಾರಿ ರಜೆ ಇಲ್ಲ.
ಈ ಮೊದಲೂ ಇದೇ ಭಾಗಗಳಲ್ಲಿ ತೀವ್ರ ಮಳೆಯ ಸಮಯದಲ್ಲಿ ಜಿಲ್ಲಾಡಳಿತ ಇಂತಹ ನಿರ್ಧಾರಗಳನ್ನು ಕೈಗೊಂಡಿತ್ತು. ಈಗಾಗ್ಲೇ ಉಳಿದ ತರಗತಿಗಳ ಪಾಠದ ವೇಳಾಪಟ್ಟಿಗಳನ್ನು ಸರಿಹೊಂದಿಸುವ ಕಾರ್ಯ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹಿನ್ನಲೆಯಲ್ಲಿ ಹೆಚ್ಚಿನ ರಜೆ ಅಗತ್ಯವಿದೆಯೇ ಎಂಬುದನ್ನು ಹವಾಮಾನ ಬದಲಾವಣೆ ಆಧರಿಸಿ ನಿರ್ಧರಿಸಲಾಗುವುದು. ಪೋಷಕರು ಹಾಗೂ ಶಿಕ್ಷಕರು ಈ ಬಗ್ಗೆ ಎಚ್ಚರದಿಂದ ಇರಬೇಕು.