
ಮಲ್ಪೆ: ಸುಳಿಗಾಳಿಗೆ ದೋಣಿ ಮಗುಚಿ ಓರ್ವ ಮೀನುಗಾರ ದುರ್ಮರಣ
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಅರಬ್ಬಿ ಸಮುದ್ರದಲ್ಲಿ, ದೀರ್ಘ ಅನುಭವ ಹೊಂದಿದ್ದ ಮೀನುಗಾರನೋರ್ವ ದುರಂತವಾಗಿ ಪ್ರಾಣ ಕಳೆದುಕೊಂಡ ಘಟನೆ ಜುಲೈ 11 ರಂದು ಬೆಳಿಗ್ಗೆ ನಡೆದಿದೆ.
ಪಿರ್ಯಾದಿ ಹರೀಶ್ (50), ಉದ್ಯಾವರದ ಗೋವಿಂದನಗರ ನಿವಾಸಿಯಾಗಿದ್ದು, ಕೃಷ್ಣ ಜಿ.ಕೊಟ್ಯಾನ್ ಅವರ ಮಾಲಿಕತ್ವದ IND-KA-02-MO-1572 ಸಂಖ್ಯೆಯ ದೋಣಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜುಲೈ 11ರಂದು ಬೆಳಿಗ್ಗೆ 6.30ಕ್ಕೆ, 24 ಮಂದಿ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ ಅವರು, ಸಮುದ್ರದಲ್ಲಿ ಬಲೆ ಹಾಕುತ್ತಿರುವ ಸಂದರ್ಭದಲ್ಲಿ ತೀವ್ರವಾದ ಸುಳಿಗಾಳಿ ಬೀಸಿದ್ದು, ಪರಿಣಾಮವಾಗಿ ದೋಣಿ ಮಗುಚಿ ಬಿದ್ದಿತು.
ಅಪಘಾತದ ವೇಳೆ ಉಳಿದ ಎಲ್ಲಾ 23 ಮಂದಿ ಈಜು ಮೂಲಕ ಪ್ರಾಣಾಪಾಯದಿಂದ ಪಾರಾಗಿದರೂ, ನೀಲಾಧರ ಜಿ. ತಿಂಗಳಾಯ (51) ಎಂಬವರು ಬಲೆಗೆ ಸಿಕ್ಕಿ ಸಮುದ್ರ ನೀರಿನಲ್ಲಿ ಅಸ್ವಸ್ಥಗೊಂಡಿದ್ದರು. ಅವರನ್ನು ತಕ್ಷಣವೇ ಇತರರು ದಡಕ್ಕೆ ತಂದು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ವೈದ್ಯರು ಅವರನ್ನು ಈಗಾಗಲೇ ಮೃತಪಟ್ತೆಂದು ಘೋಷಿಸಿದರು.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 40/2025ರಂತೆ BNSS ಸೆಕ್ಷನ್ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.