
ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿರುವ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹವು ಯಾವುದೇ ಅರ್ಥವಿಲ್ಲದ ಕ್ರಮ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವ್ಯಂಗ್ಯವಾಡಿದರು. ಸ್ಥಳೀಯ ಆಡಳಿತ ಸಂಸ್ಥೆಗಳ ಮುಂಭಾಗದಲ್ಲಿ ನಡೆಸಿದ ಈ ಪ್ರತಿಭಟನೆಯ ಉದ್ದೇಶವೇ ಜನತೆಗೆ ಸ್ಪಷ್ಟವಾಗಿಲ್ಲ. ತಮ್ಮದೇ ಪಕ್ಷದ ಆಡಳಿತದ ವಿರುದ್ಧ ಸ್ಥಳೀಯ ಪ್ರತಿನಿಧಿಗಳೇ ಪ್ರತಿಭಟನೆ ನಡೆಸುತ್ತಿರುವುದು ಬಿಜೆಪಿಗೆ ನಗೆಪಾಟಲಿಯ ವಿಷಯವಾಗಿದೆ ಎಂದು ಅವರು ಟೀಕಿಸಿದರು.
ಕಾಪುವಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊರಕೆ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹುತೇಕ ಬಿಜೆಪಿಗರು ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದವರು ಎಂದು ಹೇಳಿದರು. ಬಿಜೆಪಿ ಸದಸ್ಯರು ಗ್ರಾಮ ಪಂಚಾಯತ್ಗಳ ಮುಂದೆ ನಿಂತು ಪ್ರತಿಭಟನೆ ಮಾಡುವುದಕ್ಕಿಂತ, ಗ್ರಾಮ ಪಂಚಾಯತ್ಗಳಲ್ಲಿ ಬಾಕಿ ಉಳಿದಿರುವ ಮನೆ ನಿವೇಶನ ಮತ್ತು ಹಕ್ಕುಪತ್ರಗಳ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು ಉತ್ತಮ ಎಂದರು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುಮಾರ್, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಕಾಂಗ್ರೆಸ್ ನಾಯಕರು ಕಾಪು ದಿವಾಕರ ಶೆಟ್ಟಿ, ಶಾಂತಲತಾ ಶೆಟ್ಟಿ ಹಾಗೂ ಮಹಮ್ಮದ್ ನಿಯಾಜ್ ಉಪಸ್ಥಿತರಿದ್ದರು.