
ಬೆಂಗಳೂರು: ಆನ್‌ಲೈನ್‌ನಲ್ಲಿ ತರಿಸಿದ ಕೇಕ್ ತಿಂದು 6 ವರ್ಷದ ಮಗು ಸಾವನ್ನಪ್ಪಿದ ಶಂಕೆ
ಬೆಂಗಳೂರು ನಗರದ ಕೆ.ಪಿ. ಅಗ್ರಹಾರದಲ್ಲಿ ಆನ್‌ಲೈನ್ ಮೂಲಕ ತರಿಸಿದ ಕೇಕ್ ಸೇವನೆ ಮಾಡಿದ ಬಳಿಕ ಆರು ವರ್ಷದ ಮಗು ಸಾವನ್ನಪ್ಪಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿನಯ್ ಎಂಬ ಆರು ವರ್ಷದ ಬಾಲಕ ಮಂಗಳವಾರ ಸಂಜೆ ಕೇಕ್ ತಿಂದ ನಂತರ ತೀವ್ರ ಅಸ್ವಸ್ಥಗೊಂಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಅವನು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದು, ಘಟನೆಯ ಸಮಯದಲ್ಲಿ ಒಂದು ಹೆಣ್ಣುಮಗು ಸಂಬಂಧಿಕರ ಮನೆಯಲ್ಲಿ ಇರುವುದರಿಂದ, ಮನೆದಲ್ಲಿ ಕೇವಲ ಮೂವರು ಮಾತ್ರ ಇದ್ದರು. ಈ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿ ತಂದು ಸೇವಿಸಿದ್ದರು.
ಕೇಕ್ ಸೇವನೆಯ ಬಳಿಕ ಮಗು ತೀವ್ರ ಅಸ್ವಸ್ಥಗೊಂಡು ನಿಧನ ಹೊಂದಿದ್ದು, ತಂದೆ ಮತ್ತು ತಾಯಿಯೂ ಅಸ್ವಸ್ಥರಾಗಿದ್ದಾರೆ. ಇವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬ್) ಪರೀಕ್ಷೆಗೂ ರವಾನಿಸಲಾಗುತ್ತದೆ. ಕಿಮ್ಸ್ ಆಸ್ಪತ್ರೆಯ ವೈದ್ಯರು ಮೃತದೇಹದ ವಿವಿಧ ಅಂಗಾಂಶಗಳನ್ನು ಪರೀಕ್ಷಿಸಿ ನಿಖರ ಸಾವಿನ ಕಾರಣ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.