
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಮೊದಲು ಸಂಚು ರೂಪಿಸಲು ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದರೆಂಬ ಮಾಹಿತಿಯು ಬೆಳಕಿಗೆ ಬಂದಿದೆ. ಇದೀಗ ಆ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 2ರಂದು ಚಿಕ್ಕಮಗಳೂರಿನ ಕಳಸದ ರೆಸಾರ್ಟ್ನಲ್ಲಿ ಈ ಪಾರ್ಟಿ ನಡೆದಿದ್ದು, ಅದು ರಾತ್ರಿಯೆಲ್ಲಾ ಸಾಗಿದೆಯಂತೆ. ಮೂಲಗಳಿಂದ ಲಭಿಸಿದ ಮಾಹಿತಿಯಂತೆ, ಈ ಪಾರ್ಟಿಯು ಸುಹಾಸ್ ಶೆಟ್ಟಿ ಹತ್ಯೆಯ ಸಂಚಿನ ಭಾಗವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕ್ಯಾಂಪ್ಫೈರ್ನ ಇಡೀ ಹಿನ್ನಲೆಯಲ್ಲಿ ಮುಝಮ್ಮಿಲ್, ನಿಯಾಜ್ ಮತ್ತು ಚಿಕ್ಕಮಗಳೂರಿನ ರಂಜಿತ್ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇವರ ಜೊತೆಗೆ ಇನ್ನೂ ಐವರು ಅಪರಿಚಿತರು ಸಹ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತದೆ. ಈ ಸಂದರ್ಭ, ನಿಯಾಜ್ ಮುಝಮ್ಮಿಲ್ಗೆ ರಂಜಿತ್ನ ಪರಿಚಯವನ್ನು ಮಾಡಿಕೊಟ್ಟಿದ್ದು, ಪಾರ್ಟಿಯಲ್ಲಿಯೇ ಹತ್ಯೆಗೆ ಸಂಬಂಧಿಸಿದ ಚರ್ಚೆಗಳು ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಹತ್ಯೆಯ ಹಿಂದೆ ಫಾಝಿಲ್ನ ಸಹೋದರ ಆದಿಲ್ ಇದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಅವನು ₹5 ಲಕ್ಷ ಸುಪಾರಿ ನೀಡಿದ್ದನೆಂದು ಹೇಳಲಾಗಿದೆ. ಅದರಲ್ಲಿರುವ ₹3 ಲಕ್ಷವನ್ನು ಮುಂಗಡವಾಗಿ ಪಾವತಿಸಲಾಗಿತ್ತಂತೆ. ಈ ಹಣವನ್ನೇ ಪಾರ್ಟಿಗೆ ಬಳಸಿರುವುದಾಗಿ ಕೆಲವು ಮೂಲಗಳು ತಿಳಿಸುತ್ತವೆ.
ಮಂಗಳೂರು ಮೂಲದ ಮೊಹಮ್ಮದ್ ಮುಝಮ್ಮಿಲ್ ನಾಲ್ಕು ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಹಿಂದಿರುಗಿದ್ದಾನೆ. ಈತನ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.
ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ನಿಯಾಜ್ ಬಜ್ಪೆಯ ಶಾಂತಿಗುಡ್ಡೆ ಮಸೀದಿಯ ಬಳಿ ವಾಸವಾಗಿದ್ದ. ರಂಜಿತ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಹಾಸ್ ಶೆಟ್ಟಿಗೆ ಲಾಂಗ್ ತಂದುಕೊಟ್ಟಿದ್ದಾನೆ ಎಂಬ ಆರೋಪವಿದೆ.