
ಒಂದು ಕಡೆ ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಭಾರತದ ಕಠಿಣ ಪ್ರತಿಕ್ರಿಯೆಯ ಭೀತಿಯಿಂದ ಪಾಕಿಸ್ತಾನ ಈಗಾಗಲೇ ಒತ್ತಡಕ್ಕೊಳಗಾಗಿದ್ದರೆ, ಮತ್ತೊಂದೆಡೆ ಬಲೂಚಿಸ್ತಾನದಲ್ಲಿ ನಡೆದ ಭೀಕರ ದಾಳಿಯು ಆ ದೇಶವನ್ನು ಇನ್ನಷ್ಟು ತೀವ್ರ ಇಕ್ಕಟ್ಟಿಗೆ ತಂದುಕೊಂಡಿದೆ. ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಬಳಿ ಇರುವ ಮಾರ್ಗಟ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯ ವಾಹನದ ಮೇಲೆ ರಿಮೋಟ್ ಕಂಟ್ರೋಲ್ಡ್ ಸ್ಫೋಟಕ (IED) ದಾಳಿ ನಡೆಸಿದ್ದು, ಹತ್ತು ಜನ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂಬ ವರದಿಯಾಗಿದೆ.
ಬಿಎಲ್ಎ ವಕ್ತಾರ ಜಿಯಾಂಡ್ ಬಲೂಚ್ ನೀಡಿದ ಮಾಹಿತಿಯಂತೆ, ಈ ದಾಳಿಯಲ್ಲಿ ಶತ್ರು ವಾಹನ ಸಂಪೂರ್ಣವಾಗಿ ನಾಶವಾಗಿ, ಸಬ್ಏಡರ್ ಶೆಹಜಾದ್ ಅಮೀನ್, ನಾಯಬ್ ಸಬ್ಏಡರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್ ಮತ್ತು ಸಿಪಾಯಿ ಖುರ್ರಂ ಸಲೀಮ್ ಸೇರಿ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
“ಇದು ಕೇವಲ ಆರಂಭ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಇನ್ನೂ ತೀವ್ರಗೊಳ್ಳಲಿದೆ. ಪ್ರತಿದಿನವೂ ಪಾಕಿಸ್ತಾನಿ ಸೇನೆಗೆ ಹೊಡೆತ ನೀಡುತ್ತೇವೆ,” ಎಂದು ಬಿಎಲ್ಎ ಎಚ್ಚರಿಕೆ ನೀಡಿದೆ.
ಈ ದಾಳಿ ಬಲೂಚಿಸ್ತಾನದಲ್ಲಿ ಹೆಚ್ಚುತ್ತಿರುವ ಅಶಾಂತಿಯ ಇನ್ನೊಂದು ಉದಾಹರಣೆ. ಕೆಲವೇ ದಿನಗಳ ಹಿಂದೆ, ಝಮುರಾನ್, ಕೊಲ್ವಾ ಮತ್ತು ಕಲಾತ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಏಳು ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೆ, ಕೆಲವು ಭದ್ರತಾ ಠಾಣೆಗಳನ್ನು ಬಿಎಲ್ಎ ವಶಪಡಿಸಿಕೊಂಡಿರುವುದಾಗಿ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಸೇನೆಯ ಭದ್ರತಾ ಸಿದ್ಧತೆಯ ಕುರಿತಾಗಿ ಗಂಭೀರ ಪ್ರಶ್ನೆಗಳು ಮೂಡುತ್ತಿದ್ದಂತೆಯೇ, ದೇಶದೊಳಗಿನಿಂದ ಹಾಗೂ ಹೊರಗಿನಿಂದಲೂ ಒತ್ತಡ ಹೆಚ್ಚಾಗುತ್ತಿದೆ.