
ಬಂಟ್ವಾಳ: ಅಪಘಾತದಲ್ಲಿ ಗಾಯಗೊಂಡಿದ್ದ ಬಿ.ಸಿ.ರೋಡು ಕೈಕುಂಜೆಯ ಯುವ ವಕೀಲ ಪ್ರಥಮ್ ಬಂಗೇರ (27) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ವಾರ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು, ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೃತರ ಕುಟುಂಬ ಮಾನವೀಯತೆ ಮೆರೆದಿದ್ದು, ಅವರ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿದೆ. ಅವರ ತಂದೆ ಮತ್ತು ಸಹೋದರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಪ್ರಥಮ್ ಬಂಗೇರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದು, ಬಿ.ಸಿ.ರೋಡಿನ ಹಿರಿಯ ವಕೀಲ ಕೆ. ವೆಂಕಟ್ರಮಣ ಶೆಣೈ ಅವರ ಬಳಿ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಕಾನೂನು ಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಅವರು, ಒಬ್ಬ ಪ್ರತಿಭಾವಂತ ನೃತ್ಯಪಟುವಾಗಿಯೂ ಗುರುತಿಸಿಕೊಂಡಿದ್ದರು.
ಇತ್ತೀಚೆಗೆ, ಅವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಪ್ರಥಮ್ ಬಂಗೇರರ ಅಗಲಿಕೆ ಕುಟುಂಬ, ಸ್ನೇಹಿತರು ಮತ್ತು ಸಹವಕೀಲರ ಮನದಲ್ಲಿ ಆಘಾತ ಉಂಟುಮಾಡಿದೆ.