
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಐರ್ಬೈಲು ಸಮೀಪ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಸ್ಮರಣಾರ್ಥ ಸ್ಥಳೀಯರು ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿದ್ದರು. ಈ ಬ್ಯಾನರ್ ಐರ್ಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರವೇ ಇದ್ದು, ಪ್ರತಿದಿನ ಆ ಶಾಲೆಗೆ ತೆರಳುವ ವಿದ್ಯಾರ್ಥಿನಿ ಲಹರಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಭಾವಚಿತ್ರಕ್ಕೆ ಗೌರವ ಸಲ್ಲಿಸುತ್ತಿದ್ದಾಳೆ. ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲ್ಯದಲ್ಲಿಯೇ ದೇಶಪ್ರೇಮದ ಅಭಿವ್ಯಕ್ತಿ
ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಲಹರಿ, ದೇಶದ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳುತ್ತಾಳೆ. “ನಾವು ನಿರ್ಭೀತಿಯಾಗಿ ಬದುಕುತ್ತಿದ್ದೇವೆಂದರೆ ಅದು ಯೋಧರ ತ್ಯಾಗದಿಂದಲೇ” ಎಂದು ಹೇಳುವ ಈ ಬಾಲಕಿ, ಗ್ರಾಮಸ್ಥರ ಮೆಚ್ಚುಗೆಯನ್ನು ಗಳಿಸಿದ್ದಾಳೆ.
ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಶ್ರದ್ಧಾಂಜಲಿ ಬ್ಯಾನರ್ ಶಾಲಾ ಮಾರ್ಗದಲ್ಲಿಯೇ ಅಳವಡಿಸಿರುವುದರಿಂದ, ಪ್ರತಿದಿನ ಶಾಲೆಗೆ ತೆರಳುವಾಗ ಲಹರಿ ಅವರು ಭಾವಚಿತ್ರಕ್ಕೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುತ್ತಾಳೆ ಎಂದು ಪೋಷಕರಾದ ಸುರೇಶ್ ಪೂಜಾರಿ ತಿಳಿಸಿದ್ದಾರೆ.
“ಯೋಧನ ಸಮಾಧಿಗೆ ಗೌರವ ಸಲ್ಲಿಸುವುದು ಮೌಲ್ಯಭರಿತ ಶಿಕ್ಷಣದ ಪ್ರತೀಕ. ಈ ಬಾಲಕಿ ದೇಶಪ್ರೇಮ ಮೆರೆದಿರುವುದು ಇತರರಿಗೂ ಪ್ರೇರಣೆಯಾಗಲಿದೆ” ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ಶೆಟ್ಟಿ ಕ್ವಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯೋಧನ ಕೊನೆಯ ಕರ್ತವ್ಯ
ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಕೆರೆಮನೆ ನಿವಾಸಿ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (33), ಡಿಸೆಂಬರ್ 24 ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಎಂಬಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾದರು. ಕಿರಿದಾದ ರಸ್ತೆಯಿಂದ ಜಾರಿ, 150 ಅಡಿ ಆಳದ ಕಮರಿಗೆ ಸೇನಾ ವಾಹನ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿತು.
ಎನ್ಸಿಸಿ ತರಬೇತಿಯ ಪ್ರಭಾವದಿಂದ 26/11 ಮುಂಬಯಿ ಉಗ್ರ ದಾಳಿಯ ನಂತರ ಸೇನೆಗೆ ಸೇರುವ ದೃಢ ಸಂಕಲ್ಪ ಮಾಡಿದ್ದ ಅನೂಪ್, ದ್ವಿತೀಯ ಪಿಯುಸಿ ನಂತರ ಸೇನೆಗೆ ಸೇರ್ಪಡೆಗೊಂಡು 13 ವರ್ಷಗಳಿಂದ ದೇಶ ಸೇವೆ ಸಲ್ಲಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ವಿವಾಹವಾದ ಅವರು, ಡಿಸೆಂಬರ್ ಮೊದಲ ವಾರದಂದು ಮಗಳ ಹುಟ್ಟುಹಬ್ಬವನ್ನು ಆಚರಿಸಿ, ಕೊಡಿ ಹಬ್ಬದಲ್ಲಿ ಭಾಗವಹಿಸಿ, ಡಿ.21 ರಂದು ಕರ್ತವ್ಯಕ್ಕೆ ಮರಳಿದ್ದರು.