March 14, 2025
025-02-08 121959

ಉಡುಪಿ: ಹಿರಿಯರ ಚಿಂತನೆ ಮತ್ತು ತ್ಯಾಗದ ಫಲವಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಆಶಯವನ್ನು ಅನುಸರಿಸುತ್ತಾ ಉದ್ಯಾವರ ಬಿಲ್ಲವ ಮಹಾಜನ ಸಂಘ ಅಸ್ತಿತ್ವಕ್ಕೆ ಬಂದಿದೆ. 80 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಸಂಘದ ಸಾಧನೆಗೆ ನಾರಾಯಣಗುರು ಸಭಾಭವನ ಮತ್ತೊಂದು ಮಹತ್ವದ ಮೈಲಿಗಲ್ಲಾಗಿ ಉದಯಿಸಲಿದೆ. ಸುಮಾರು 2.5 ಕೋಟಿ ರೂ.ಗಳ ವೆಚ್ಚದಲ್ಲಿ ನಾರಾಯಣಗುರು ಸಮುದಾಯ ಭವನ ನಿರ್ಮಾಣ ಸಮಿತಿಯು ಈ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಭವನವನ್ನು ನಿರ್ಮಿಸಿದ್ದು, ಫೆಬ್ರವರಿ 9ರ ಬೆಳಿಗ್ಗೆ 9.30ಕ್ಕೆ ಅದ್ಧೂರಿಯಾಗಿ ಉದ್ಘಾಟನೆ ನಡೆಯಲಿದೆ.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ನಾರಾಯಣಗುರು ಕಟ್ಟಡವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಭೋಜನ ಸಭಾಂಗಣವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರೂಫ್ ಟಾಪ್ ಸಭಾಂಗಣವನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮತ್ತು ನಾರಾಯಣಗುರು ಸಭಾಂಗಣವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೂಲ್ಕಿ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಂಗಳೂರು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಎಂಆರ್‌ಜಿ ಗ್ರೂಪ್ ಚೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಉದ್ಯಾವರ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು. ಪ್ರಭಾಕರ್ ರಾವ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ಭಾಗವಾಗಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಮೆಲೋಡಿ ಫ್ರೆಂಡ್ಸ್ ಮಧುಕರ್ ಉದ್ಯಾವರ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಸಂಜೆ 4ರಿಂದ ಹಾಸ್ಯ ಕಲಾವಿದರಿಂದ ಯಕ್ಷತೆಲಿಕೆ-ಯಕ್ಷ ಹಾಸ್ಯ ವೈಭವ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಕೋಟ್ಯಾನ್ ಹಾಗೂ ನಿರ್ಮಾಣ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷತೆಗಳು:
ಈ ನಾರಾಯಣಗುರು ಸಭಾಭವನವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, 400 ಮಂದಿಗೆ ಆಸನ ವ್ಯವಸ್ಥೆ ಹೊಂದಿದೆ. ಜೊತೆಗೆ ವಿಶಾಲ ಭೋಜನಶಾಲೆ, ಮದುವೆ ಮತ್ತು ವಿವಿಧ ಶುಭಕಾರ್ಯಗಳಿಗೆ ಸೂಕ್ತವಾದ ಸಭಾಂಗಣ, ಆಧುನಿಕ ಸೌಲಭ್ಯಗಳು, ವೆಜ್ ಮತ್ತು ನಾನ್‌ವೆಜ್ ಊಟೋಪಹಾರ ವ್ಯವಸ್ಥೆ, ಹಾಗೆಯೇ ವಿಶಾಲ ಪಾರ್ಕಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ.


*Advertisement*