
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರಾವಧಿಯ ಮೊದಲ ದಿನವೇ ಭಾರತವನ್ನೂ ಒಳಗೊಂಡಂತೆ 10 ‘ಬ್ರಿಕ್ಸ್’ ದೇಶಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಬ್ರಿಕ್ಸ್ ದೇಶಗಳು ತಮ್ಮ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅಮೆರಿಕದ ಡಾಲರ್ ಬದಲು ಬೇರೆ ಕರೆನ್ಸಿಯನ್ನು ಬಳಸಲು ಯತ್ನಿಸಿದರೆ, ಅಂತಹ ದೇಶಗಳಿಗೆ ಅಮೆರಿಕದ ಜತೆ ನಡೆಸುವ ವ್ಯವಹಾರಕ್ಕೆ ಶೇ.100ರಷ್ಟು ಸಂಕ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಅಧಿಕಾರಾವಧಿಯ ಮೊದಲ ದಿನವೇ ಕಠಿಣ ವಲಸೆ ನೀತಿ ಸೇರಿದಂತೆ ಹಲವು ಕಠಿಣ ಕಾರ್ಯಾದೇಶಗಳಿಗೆ ಟ್ರಂಪ್ ಸಹಿ ಹಾಕಿದ್ದಾರಾದರೂ, ‘ಬ್ರಿಕ್ಸ್’ ದೇಶಗಳ ವಿಚಾರದಲ್ಲಿ ಯಾವುದೇ ಆದೇಶಕ್ಕೆ ಸಹಿ ಹಾಕಿಲ್ಲ. ಆದರೆ, ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಈ ಕುರಿತು ಮಂಗಳವಾರ ಅವರು ಈ ಎಚ್ಚರಿಕೆ ರವಾನಿಸಿದ್ದಾರೆ.
ವಿಶ್ವಾದ್ಯಂತ ಡಾಲರ್ ಮೌಲ್ಯವು ಕುಸಿಯುತ್ತಿರುವುದನ್ನು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದ ಹಿತಾಸಕ್ತಿ ರಕ್ಷಿಸಲು ಇಂತಹ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ.
10 ಬ್ರಿಕ್ಸ್ ದೇಶಗಳು
‘ಬ್ರಿಕ್ಸ್’ ಮೈತ್ರಿಕೂಟವು ಅಮೆರಿಕದ ಹೊರತಾದ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಇದರಲ್ಲಿ ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್ ಮತ್ತು ಅರಬ್ ಸಂಯುಕ್ತ ಸಂಸ್ಥಾನ ಸೇರಿದಂತೆ 10 ದೇಶಗಳಿವೆ.