
ಉಡುಪಿ: ದುರ್ಗಮ ಹಾದಿಯಲ್ಲಿ ತಮ್ಮ 25 ವರ್ಷ ಹಳೆಯ ಹೀರೋ ಹೊಂಡಾ ಸ್ಟೆಂಡರ್ ಬೈಕ್ ನಲ್ಲಿ ಪ್ರಯಾಣಿಸಿ, ಜಮ್ಮು ಕಾಶ್ಮೀರದ ವಿಶ್ವದ ಎರಡನೇ ಅತೀ ಎತ್ತರದ ಪ್ರದೇಶವಾದ ಖರ್ದುಂಗ್ಲಾ (17,982 ಅಡಿ ಎತ್ತರ) ತಲುಪಿ ಕನ್ನಡ ಬಾವುಟ ಹಾರಿಸಿರುವ ಶಿರ್ವದ ರಾಜೇಂದ್ರ ಶೆಣೈ ಮತ್ತು ಅವರ ಪುತ್ರ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಹೀರೋ ಮೋಟೋ ಕಾರ್ಪ್ ಸಂಸ್ಥೆ ಗುರುತಿಸಿದೆ. ಈ ಸಾಧನೆಗೆ ಗೌರವವಾಗಿ ಸಂಸ್ಥೆ ಹೀರೋ ಸೆಂಟೆನ್ನಿಯಲ್ ಬೈಕ್ ಅನ್ನು ಪ್ರಶಸ್ತಿಯಾಗಿ ನೀಡಲಿದೆ.
ಪ್ರಜ್ವಲ್ ಶೆಣೈ ತಮ್ಮ 25 ವರ್ಷದ ಹಳೆಯ ಹೀರೋ ಹೊಂಡಾ ಸ್ಟೆಂಡರ್ ಬೈಕ್ ಮೂಲಕ ದೇಶದ 17 ರಾಜ್ಯಗಳಲ್ಲಿ ಕೆಲವೊಮ್ಮೆ ತಂದೆಯೊಂದಿಗೆ, ಬಹುತೇಕ ಸ್ವಯಂ ಪ್ರೇರಣೆಯಿಂದ, 5 ವರ್ಷಗಳ ಅವಧಿಯಲ್ಲಿ ಸುಮಾರು 45,000 ರಿಂದ 50,000 ಕಿ.ಮೀ. ಪ್ರಯಾಣ ಮಾಡಿದ್ದಾರೆ. 19ನೇ ವಯಸ್ಸಿನಲ್ಲಿ ಅವರು ಮೊದಲ ಬಾರಿಗೆ ಬೈಕ್ ಮೂಲಕ ಬೆಂಗಳೂರಿಗೆ ಪ್ರಯಾಣ ಆರಂಭಿಸಿದ್ದು, ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾದ ಮಾರ್ದೋಳ್, ಪುರಿ ಜಗನ್ನಾಥ ದೇವಾಲಯ, ಶಿರಡಿ, ನಾಸಿಕ್ ಪಂಡರಾಪುರ, ಅಯೋಧ್ಯೆ ಸೇರಿದಂತೆ ಹಲವು ಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಭೇಟಿಯಾಗಿದ್ದಾರೆ.
2024ರ ಜೂನ್‌ನಲ್ಲಿ, ಅಪ್ಪ-ಮಗ ಜೋಡಿ ಬೈಕ್ ಮೂಲಕ 10 ದಿನಗಳಲ್ಲಿ 2,100 ಕಿ.ಮೀ. ದೂರ ಪ್ರಯಾಣಿಸಿ ಖರ್ದುಂಗ್ಲಾ ತಲುಪಿ ಕನ್ನಡ ಧ್ವಜ ಹಾರಿಸಿ ಭಾಷಾ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
2025ರ ಫೆಬ್ರವರಿಯಲ್ಲಿ, 9 ದಿನಗಳಲ್ಲಿ 4,000 ಕಿ.ಮೀ. ದೂರ ಪ್ರಯಾಣಿಸಿ ಪ್ರಜ್ವಲ್ ಶೆಣೈ ಮಹಾಕುಂಭ ಮೇಳದ ಪ್ರಯಾಗ್‌ರಾಜ್ ತಲುಪಿದ್ದು, ಪವಿತ್ರ ಸ್ನಾನ ಮಾಡಿದರು. ಹೀರೋ ಸಂಸ್ಥೆಯ 25 ವರ್ಷ ಹಳೆಯ ಬೈಕ್ ಮೂಲಕ ದೇಶಾದ್ಯಂತ ಈ ಸಾಹಸಮಯ ಪ್ರಯಾಣ ನಡೆಸಿದ ಪ್ರಜ್ವಲ್ ಅವರ ಸಾಧನೆಯನ್ನು ಸಂಸ್ಥೆ ವಿಶೇಷವಾಗಿ ಪ್ರಶಂಸಿಸಿದೆ.
ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಸ್ಥಾಪಕ ಡಾ| ಬ್ರಿಜ್ ಮೋಹನ್‌ಲಾಲ್ ಮುಂಜಾಲ್ ಅವರ 101ನೇ ಜನ್ಮದಿನವನ್ನು ಸ್ಮರಿಸಲು ತಯಾರಿಸಿದ 100 ಹೀರೋ ಸೆಂಟೆನ್ನಿಯಲ್ ಬೈಕ್‌ಗಳಲ್ಲಿ ಒಂದನ್ನು (ಮೌಲ್ಯ ರೂ. 10 ಲಕ್ಷ) ‘ಬೆಸ್ಟ್ ಕಸ್ಟಮರ್’ ಪುರಸ್ಕಾರವಾಗಿ ಪ್ರಜ್ವಲ್ ಶೆಣೈ ಅವರಿಗೆ ನೀಡಲಾಗುತ್ತಿದೆ.
ಈ ವಿಶೇಷ ಬೈಕ್ ಹಸ್ತಾಂತರ ಸಮಾರಂಭವು ಜೂನ್ 28 ರಂದು ಉಡುಪಿಯ ಶಕ್ತಿ ಹೀರೋ ಮೋಟೋಸ್ ಶೋರೂಮ್‌ನಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.