
ಯುವಕನ ಆತ್ಮಹತ್ಯೆ: ಹೈಸ್ಕೂಲ್ ವಿದ್ಯಾರ್ಥಿನಿಯರ ಶೋಷಣೆಯ ಆರೋಪವಿರುವ ವಿಡಿಯೋ ವೈರಲ್
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕ ತೌಡತ್ತಿ ಗ್ರಾಮದ 26 ವರ್ಷದ ಸಂತೋಷ ಗಣಪತಿ ನಾಯ್ಕ ಎಂಬ ಯುವಕನು ಸಿದ್ದಾಪುರ ತಾಲೂಕಿನ ಕಾಳೇನಳ್ಳಿ ಸಮೀಪದ ಕಾಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಚನಮಾಂವನ ಚರಣ, ಮನೋಜ್ ಮತ್ತು ಲೋಕೇಶ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತನ ತಂದೆ ಗಣಪತಿ ನಾರಾಯಣ ನಾಯ್ಕ ಅವರು ತಮ್ಮ ಮಗನಿಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿತರ ಜೊತೆ ಇನ್ನೂ ನಾಲ್ವರು ಸೇರಿದ್ದರ ಬಗ್ಗೆ ಉಲ್ಲೇಖವಿದೆ.
ಸಂತೋಷ ಆತ್ಮಹತ್ಯೆಗೆ ಮೊದಲು ಒಂದು ವಿಡಿಯೋ ದಾಖಲಿಸಿದ್ದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಆತ ತಾಲ್ಲೂಕಿನ ಕೆಲವರು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾನೆ. ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾನೆ.
ಆತನ ಹೇಳಿಕೆಯಂತೆ, ತನ್ನ ಪ್ರೇಯಸಿಗಾಗಿ ಈ ಸಂಬಂಧ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನಕಲಿ ಸಾಮಾಜಿಕ ಜಾಲತಾಣ ಖಾತೆ ಸ್ಥಾಪಿಸಿ ಕೆಲವರೊಂದಿಗೆ ಚಾಟ್ ನಡೆಸಿದ್ದ. ಈ ಸಂದರ್ಭ, ಅಪ್ರಾಪ್ತ ಬಾಲಕಿಯರನ್ನು ಮೋಸದಿಂದ ನಂಬಿಸಿ ಲೈಂಗಿಕ ಶೋಷಣೆ ನಡೆಸುತ್ತಿದ್ದವರ ಬಗ್ಗೆ ಸಾಕ್ಷ್ಯಗಳು ಅವನಿಗೆ ಲಭಿಸಿದ್ದವು. ಈ ಹಿನ್ನೆಲೆಯಲ್ಲಿ ಆತ ಕೆಲ ಅಶ್ಲೀಲ ಫೋಟೋಗಳು ಮತ್ತು ಚಾಟ್‌ಗಳನ್ನೂ ವಿಡಿಯೋದಲ್ಲಿ ಸೇರಿಸಿದ್ದಾನೆ.
ತನ್ನ ವಿಚಾರಣೆಯ ಬಗ್ಗೆ ಗೊತ್ತಾದ ನಂತರ, ಸಂಬಂಧಪಟ್ಟವರು ಜೀವ ಬೆದರಿಕೆ ಹಾಕಿದ್ದು, ತನ್ನ ಮನೆಗೆ ಬಂದು ಟ್ಯಾಬ್ ಕಸಿದುಕೊಂಡಿದ್ದಾರೆ ಎಂದು ಸಂತೋಷ ದೂರಿಸಿದ್ದಾನೆ. ಜೊತೆಗೆ, ಆತ ಡೆತ್ ನೋಟ್‌ನ್ನು ಬರೆದಿದ್ದು, ಕೆಲವು ರಾಜಕೀಯ ಮುಖಂಡರು ಮತ್ತು ವಕೀಲರ ಹೆಸರುಗಳು ಹಾಗೂ ಮೊಬೈಲ್ ನಂಬರ್‌ಗಳನ್ನೂ ವಿಡಿಯೋದಲ್ಲಿ ಉಲ್ಲೇಖಿಸಿದ್ದಾನೆ.
ತಾನೇ ನಕಲಿ ಖಾತೆ ಸೃಷ್ಟಿಸಿ ಚಾಟ್ ಮಾಡಿದ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡ ಸಂತೋಷ, ತನ್ನ ಪ್ರೇಯಸಿ ತನ್ನ ವಿರುದ್ಧ ನಿಂತ ಕಾರಣದಿಂದ ಆತ್ಮಹತ್ಯೆಗೆ ಮುಂದಾದುದಾಗಿ ಹೇಳಿದ್ದಾನೆ.