
ಹಾಸನ: ಮನೆಯಲ್ಲಿಯೇ ಊಟ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನ ನಗರದ ಸತ್ಯಮಂಗಲ ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ಚೇತನ್ (35) ಎಂದು ಗುರುತಿಸಲಾಗಿದೆ. ಅವರು ಮೂಲತಃ ಕಿಕ್ಕೇರಿ ಗ್ರಾಮದವರು. ಹಾಸನ ಹಳೆಯ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದರು.
ಮಂಗಳವಾರ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬರುವ ಸಮಯದಲ್ಲಿ ಪತ್ನಿ ಊಟಕ್ಕೆ ಕರೆಯುತ್ತಾರೆ. ಊಟಕ್ಕೆ ಕುಳಿತುಕೊಳ್ಳುವಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಎದೆ ನೋಯುತ್ತಿದೆ ಎಂದು ಪತ್ನಿಗೆ ತಿಳಿಸಿದ್ದಾರೆ. ತಕ್ಷಣವೇ ಎದ್ದು ನಿಲ್ಲುವ ಪ್ರಯತ್ನದಲ್ಲಿ ತಲೆಯೆರುಗಿ ನೆಲಕ್ಕೆ ಬಿದ್ದಿದ್ದಾರೆ.
ಅವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ.