
ಉಡುಪಿ: ಕಾಂತಾರ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದರೂ, ಅದರೊಂದಿಗೆ ಸಂಬಂಧಿಸಿದ ಅವಘಡಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.
ಕಾಂತಾರ ಸಿನಿಮಾದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು ಇಂದು ಹಿರಿಯಡ್ಕದಲ್ಲಿ ಕುಸಿದು ಮರಣಹೊಂದಿದ್ದಾರೆ. ಮೃತರಾದವರು ಕಾಂತಾರದ ಮೊದಲ ಭಾಗದಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೆರಡೂರು ಮೂಲದ, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಅಧಿಕಾರಿ ಟಿ. ಪ್ರಭಾಕರ್ ಕಲ್ಯಾಣಿ ಎಂದು ಗುರುತಿಸಲಾಗಿದೆ.
ಮೃತರಾದ ಪ್ರಭಾಕರ್ ಅವರು ಪತ್ನಿ, ಒಬ್ಬ ಮಗ ಮತ್ತು ಅಪಾರ ಬಂಧು-ಬಳಗವನ್ನು ಹಿಂದೆ ಬಿಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ.
ಇವರು ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿ ಬಿದ್ದಿದ್ದರು. ಚಿಕಿತ್ಸೆ ಪಡೆದಿದ್ದ ಇವರು, ಇಂದು ಬೆಳಿಗ್ಗೆ 8:30 ಸುಮಾರಿಗೆ ಮನೆಯಲ್ಲಿ ಕೈ-ಕಾಲು ನೋವು ಎಂದು ಪತ್ನಿಗೆ ಹೇಳಿಕೊಂಡಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನವೇ ಅವರ ಪ್ರಾಣ ಹಾರಿಹೋಯಿತು.
ರಂಗಕಲಾವಿದರಾಗಿ ಅನೇಕ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಪ್ರಭಾಕರ್ ಅವರು, ಕಾಂತಾರ ಸಿನಿಮಾಕ್ಕೆ ಸುಮಾರು ಒಂದು ವರ್ಷದಿಂದ ಗಡ್ಡವನ್ನು ಬೆಳೆಸಿಕೊಂಡಿದ್ದರು. ಆದರೆ, ಚಿತ್ರ ತಂಡವು ಅವರಿಗೆ ಮೊದಲು ನೀಡುವುದಾಗಿ ಹೇಳಿದ ಪಾತ್ರವನ್ನು ಬದಲಾಯಿಸಿ ಬೇರೊಂದು ಪಾತ್ರ ನೀಡಿದ್ದರಿಂದ ಅವರು ಬಹಳ ಮನಸ್ತಾಪ ಪಟ್ಟುಕೊಂಡಿದ್ದರು ಎಂದು ಅವರ ಸನಿಹದವರ ಮಾಹಿತಿ ತಿಳಿದುಬಂದಿದೆ.