
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಮೂಲದ ಉದ್ಯಮಿ ಹರ್ಷವರ್ಧನ ಕಿಕ್ಕೇರಿ (57) ಅವರು ಅಮೆರಿಕದ ವಾಷಿಂಗ್ಟನ್ ಸಮೀಪದ ನ್ಯೂ ಕ್ಯಾಸಲ್ ನಗರದ ತಮ್ಮ ನಿವಾಸದಲ್ಲಿ ಪತ್ನಿ ಶ್ವೇತಾ ಹಾಗೂ ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ, ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಅಮೆರಿಕದ ಸ್ಥಳೀಯ ಸಮಯದ ಪ್ರಕಾರ ಈ ದಾರುಣ ಘಟನೆ ಗುರುವಾರ ರಾತ್ರಿ ಸಂಭವಿಸಿದ್ದು, ತಡವಾಗಿ ಹೊರಹೊಮ್ಮಿದೆ. ಘಟನೆಯ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿರುವುದಾಗಿ ಡೆಕ್ಕನ್ ಹೆರಾಲ್ಡ್ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳು ವರದಿ ಮಾಡಿವೆ. ಘಟನೆ ವೇಳೆ ಮನೆಯ ಹೊರಗೆ ಇದ್ದ 7 ವರ್ಷದ ಮತ್ತೊಬ್ಬ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಹರ್ಷವರ್ಧನ ಕಿಕ್ಕೇರಿ ಪ್ರಸಿದ್ಧ ಭಾಷಾತಜ್ಞರಾದ ಕಿಕ್ಕೇರಿ ನಾರಾಯಣ್ ಅವರ ಪುತ್ರ. ತಾಯಿ ಗಿರಿಜಾ ನಾರಾಯಣ್ ಈಗ ಮೈಸೂರು ವಿಜಯನಗರದಲ್ಲಿ ತಮ್ಮ ಮತ್ತೊಂದು ಪುತ್ರ ಚೇತನ್ ಜೊತೆಗೆ ವಾಸಿಸುತ್ತಿದ್ದಾರೆ. ಹರ್ಷವರ್ಧನ ಮತ್ತು ಚೇತನ್ ಇಬ್ಬರೂ ಚೆಸ್ ಆಟದಲ್ಲಿ ಪರಿಣತಿ ಹೊಂದಿದ್ದರು. ಹರ್ಷವರ್ಧನ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಮೂಲದವರು. ಮೈಸೂರು ನಗರದ ಎಸ್‌ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸ ಆರಂಭಿಸಿದ್ದರು.
ರೋಬೋಟಿಕ್ಸ್ ಕ್ಷೇತ್ರದಲ್ಲಿ ಪರಿಣತಿ ಪಡೆದ ಹರ್ಷವರ್ಧನ, ಕರ್ನಾಟಕದ ಅನೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುವ ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ನವೋದ್ಯಮ ಆರಂಭಿಸಲು ಪ್ರೇರಣೆ ನೀಡುತ್ತಿದ್ದರು. ಮೈಸೂರಿನ ಎನ್‌ಐಇ, ಎಸ್‌ಜೆಸಿಇ, ಹಾಗೂ ಸಿಎಫ್‌ಟಿಆರ್‌ಐ ಸಂಸ್ಥೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವು ಸ್ಥಾಪಿಸಿದ ‘ಹೋಲೋವರ್ಡ್’ ಮತ್ತು ‘ಹೋಲೋಸ್ಯೂಟ್’ ಕಂಪನಿಗಳ ಮೂಲಕ robotics ಕ್ಷೇತ್ರದಲ್ಲಿ ಗಮನ ಸೆಳೆದಿದ್ದರು. ‘ಹೋಲೋವರ್ಡ್’ ಕಂಪನಿಯಲ್ಲಿ ಅವರು ಸಿಇಒ ಹಾಗೂ ಸಿಟಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಶ್ವೇತಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಕಂಪನಿಯ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು. ಗಡಿಯಲ್ಲಿ ಯೋಧರಂತೆ ಕಾರ್ಯನಿರ್ವಹಿಸುವ ರೋಬೋಟ್ಸ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಹರ್ಷವರ್ಧನ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಅಲ್ಲದೆ, ವಿಶ್ವಸಂಸ್ಥೆಯ ‘ನೋವಸ್’ ಸಮ್ಮೇಳನದಲ್ಲಿ ‘ಹೋಲೋವರ್ಡ್’ ಕಂಪನಿಗೆ ‘ಸುಸ್ಥಿರ ತಂತ್ರಜ್ಞಾನ ಸಂಸ್ಥೆ’ ಎಂಬ ಪ್ರಶಸ್ತಿ ಸಿಕ್ಕಿತ್ತು.