
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣವು ಕರ್ನಾಟಕದ ಗೌರವಕ್ಕೆ ತೀವ್ರ ಧಕ್ಕೆ ತಂದು, ರಾಜ್ಯದ ಆಡಳಿತ ವ್ಯವಸ್ಥೆಯನ್ನು ಗಂಭೀರ ಪ್ರಶ್ನೆಗಳ ಮುಂದೆ ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಈಗ “ಕ್ರಿಮಿನಲ್ ಕ್ಯಾಬಿನೆಟ್” ಇದೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಅಧಿಕಾರದ ಆಸೆಯಿಂದ ರಾಜ್ಯವನ್ನು ನೈತಿಕ ಅವನತಿಗೆ ತಳ್ಳುತ್ತಿದೆ ಎಂದು ಟೀಕಿಸಿದರು. ಕೇವಲ ಎರಡು ವರ್ಷಗಳ ಆಡಳಿತದಲ್ಲಿ ಅನೇಕ ಹಗರಣಗಳು ಬೆಳಕಿಗೆ ಬಂದಿವೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಹಗರಣಗಳ ಸರಮಾಲೆ ಮುಂದುವರೆದಿದ್ದು, ವಿಧಾನಸೌಧ ಕೂಡ ಇದಕ್ಕೆ ಸಾಕ್ಷಿಯಾಗಿದೆ. ಮುಂಚಿತವಾಗಿ ರಾಜ್ಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು, ಈಗ ಅದಕ್ಕೆ ‘ಹನಿ ಬಿಕ್ಕಟ್ಟು’ ಕೂಡ ಸೇರಿದೆ. ಆರ್ಥಿಕ ಮತ್ತು ನೈತಿಕವಾಗಿ ದಿವಾಳಿಯಾದ ಸರ್ಕಾರವು, ಹನಿಟ್ರ್ಯಾಪ್ ಸಂಬಂಧಿತ ಕೃತ್ಯಗಳು ನಡೆದಿರುವುದನ್ನು ಸಂಪುಟದ ಸಚಿವರೊಬ್ಬರೇ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಆದರೆ ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಟೀಕಿಸಿದರು.
ಸಚಿವ ಸಂಪುಟದಲ್ಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದಾದರೆ, ಈ ಸಚಿವ ಸಂಪುಟವನ್ನು ಹೇಗೆ ಪರಿಗಣಿಸಬೇಕು? ಎಂದು ಪ್ರಶ್ನಿಸಿದ ಬೊಮ್ಮಾಯಿ, ಈ ಸರ್ಕಾರ ತನ್ನ ನೈತಿಕತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, “ಕ್ರಿಮಿನಲ್ ಕ್ಯಾಬಿನೆಟ್” ಗಿಂತ ಕಡಿಮೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅನೈತಿಕ ಚಟುವಟಿಕೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದ್ದು, ಈ ಹೊಣೆಯನ್ನು ಸ್ವೀಕರಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. ಇಲ್ಲವಾದರೆ, ಇಂತಹ ಆಡಳಿತವನ್ನು ಆಯ್ಕೆ ಮಾಡಿರುವ ಕರ್ನಾಟಕದ ಜನತೆ ಪಶ್ಚಾತ್ತಾಪಪಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.