
ಪುನೀತ್ ರಾಜ್‌ಕುಮಾರ್ ಅವರ ಹುಡುಗರು ಚಿತ್ರದ ‘ಬೋರ್ಡು ಇರದ ಬಸ್ಸನು’ ಹಾಗೂ ಪ್ರಸಿದ್ಧ ‘ಕಾಂಟಾ ಲಗಾ’ ಹಾಡಿನಲ್ಲಿ ನೃತ್ಯ ಮಾಡಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಾಂಟಾ ಲಗಾ ಎಂಬ ಜನಪ್ರಿಯ ಸಂಗೀತ ವೀಡಿಯೋದಿಂದ ಪ್ರಸಿದ್ಧಿ ಪಡೆದಿದ್ದ ಶೆಫಾಲಿ ಜರಿವಾಲಾ ಶುಕ್ರವಾರ ಮುಂಬೈನಲ್ಲಿ ಕೊನೆಯುಸಿರೆಳೆದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ಹೃದಯಾಘಾತವೇ ಅವರ ಸಾವಿಗೆ ಕಾರಣವೆಂದು ತಿಳಿದು ಬಂದಿದೆ.
ಶುಕ್ರವಾರ ಶೆಫಾಲಿ ಅವರು ಅಚಾನಕ್ ಕುಸಿದು ಬಿದ್ದರು. ತಕ್ಷಣವೇ ಅವರ ಪತಿ ಪರಾಗ್ ತ್ಯಾಗಿ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮರಣ ಹೊಂದಿದ್ದರು ಎಂದು ವೈದ್ಯರು ತಿಳಿಸಿದರು.
2000ರ ದಶಕದ ಆರಂಭದಲ್ಲಿ ಕಾಂಟಾ ಲಗಾ ರೀಮಿಕ್ಸ್ ವೀಡಿಯೋದ ಮೂಲಕ ಶೆಫಾಲಿ ಜರಿವಾಲಾ ಖ್ಯಾತಿ ಗಳಿಸಿದರು. ಇದರಿಂದಲೇ ಅವರಿಗೆ ‘ಕಾಂಟಾ ಲಗಾ ಗರ್ಲ್’ ಎಂಬ ಹೆಸರು ಸಿಕ್ಕಿತು. ನಂತರ ಅವರು ಸಲ್ಮಾನ್ ಖಾನ್ ಅಭಿನಯದ ಮುಜ್ಸೆ ಶಾದಿ ಕರೋಗಿ ಸಿನಿಮಾದಲ್ಲೂ ನಟಿಸಿದರು. ಇದಲ್ಲದೇ ನಾಚ್ ಬಲಿಯೇ ಹಾಗೂ ಬಿಗ್ ಬಾಸ್ 13 ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು.