
ಉಡುಪಿ: ಬ್ರಹ್ಮಾವರದ ಕುಂಜಾಲಿಯಲ್ಲಿ ನಡೆದ ಗೋ ಹತ್ಯೆ ಪ್ರಕರಣಕ್ಕೆ ಜಿಹಾದಿ ಶಕ್ತಿಗಳ ಕೈವಾಡವಿದೆ ಎಂದು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷದ್ ನಾಯಕ ಶರಣ್ ಪಂಪ್ ವೆಲ್ ಅವರನ್ನು ತಕ್ಷಣವೇ ಬಂಧಿಸಿ, ಅವರ ಹೇಳಿಕೆಯ ಹಿನ್ನೆಲೆ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಶರಣ್ ಪಂಪ್ ವೆಲ್ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತಮ್ಮ ಕೋಮು ಪ್ರಚೋದನಾತ್ಮಕ ಹೇಳಿಕೆಗಳ ಮೂಲಕ ಅಶಾಂತಿ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂತಹ ವ್ಯಕ್ತಿ ಉಡುಪಿಗೆ ಬಂದು, ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿರುವ ಜನರಲ್ಲಿ ಅನುಮಾನ ಮತ್ತು ದ್ವೇಷದ ಬೀಜ ಬಿತ್ತುವಂತ ಅವಕಾಶ ಜಿಲ್ಲಾಡಳಿತ ನೀಡಬಾರದು ಎಂದು ಅವರು ಹೇಳಿದರು.
ಕುಂಜಾಲಿಯಲ್ಲಿ ಗೋ ಹತ್ಯೆ ಮಾಡಿರುವವರು ಹಿಂದೂ ಸಮುದಾಯದವರೇ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಂದಿದ್ದು, ಜಿಹಾದಿ ಶಕ್ತಿಗಳು ಅವರನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಿದೆಯೆಂದು ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ. ಇದರಿಂದ ಅವರ ಬಳಿ ಹೆಚ್ಚಿನ ಮಾಹಿತಿ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಶರಣ್ ಪಂಪ್ ವೆಲ್ ಅವರನ್ನು ತಕ್ಷಣವೇ ಬಂಧಿಸಿ, ಅವರು ನೀಡಿರುವ ಮಾಹಿತಿಯ ಸಂಪೂರ್ಣ ತನಿಖೆ ನಡೆಸಿ, ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದು ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.