August 5, 2025
sowjanya_gundurao

ಮಂಗಳೂರು: ಧರ್ಮಸ್ಥಳ ಪುಣ್ಯಕ್ಷೇತ್ರವನ್ನು ಕಳಂಕಿತಗೊಳಿಸಲು ಕೆಲವರು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದ್ದಾರೆ ಎಂಬ ಆತಂಕವನ್ನು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಇತ್ತೀಚೆಗೆ ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ, ಈ ಪ್ರಕರಣವನ್ನು ಸಂಪೂರ್ಣವಾಗಿ ಪರಿಶೀಲಿಸಲು ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ. ಈ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್, “ಅನುಮಾನಾಸ್ಪದ ಸಾವುಗಳ ಕುರಿತು ಸಂಪೂರ್ಣ ನಿಖರ ತನಿಖೆ ನಡೆಯಬೇಕು. ಈಗಾಗಲೇ SIT ರಚನೆಯಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ ತಪ್ಪಿತನಕ್ಕೆ ತಕ್ಕ ಶಿಕ್ಷೆ ನೀಡಲಾಗುತ್ತದೆ,” ಎಂದರು.

ಅವರು ಮುಂದುವರೆದು, “ಒಬ್ಬ ಸಾಕ್ಷಿದಾರನ ಹೇಳಿಕೆಗೆ ಆಧಾರವಿಟ್ಟು ತಕ್ಷಣ ತೀರ್ಮಾನಕ್ಕೆ ಬಾರದಿರಿ. ಅವರು ಯಾರು ಎಂಬುದಕ್ಕಿಂತಲೂ ಅವರು ಹೇಳಿರುವ ಮಾಹಿತಿ ಎಲ್ಲಿ, ಹೇಗೆ ಬಂದಿದೆ ಎಂಬುದೇ ಮುಖ್ಯ. ಆ ಪ್ರದೇಶದಲ್ಲಿ ನಿಜಕ್ಕೂ ಏನು ನಡೆದಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು,” ಎಂದು ತಿಳಿಸಿದರು.

ಧರ್ಮಸ್ಥಳ ಕ್ಷೇತ್ರವು ಭಕ್ತಿಯ ಹಾಗೂ ನಂಬಿಕೆಯ ಕೇಂದ್ರವಾಗಿದ್ದು, ಈ ಕ್ಷೇತ್ರದ ಪವಿತ್ರತೆಗೆ ಧಕ್ಕೆಯಾಗದಂತೆ ಎಲ್ಲಾ ಸ್ಪಷ್ಟತೆ ಮತ್ತು ಗೌರವದಿಂದ ನಡೆದುಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು. “ಇತ್ತೀಚೆಗೆ ಕೆಲವರು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ತೇಜೋವಧೆಗೆ ಯತ್ನಿಸುತ್ತಿರುವ ಸಾಧ್ಯತೆಯೂ ಇದೆ,” ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

“ಸೌಜನ್ಯ ಪ್ರಕರಣವಾಗಿರಲಿ, ಅಥವಾ ಇತರ ಯಾವುದೇ ಅಪರಾಧವಾಗಿರಲಿ – ಎಲ್ಲದರಿಗೂ ನ್ಯಾಯ ದೊರೆಯಲಿದೆ. ಈ ತನಿಖೆಯ ಮೇಲೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ. ಜನರ ನಂಬಿಕೆಗೆ ಧಕ್ಕೆ ಬಾರದಂತೆ ಸರ್ಕಾರ ಕಾರ್ಯನಿರ್ವಹಿಸುತ್ತದೆ,” ಎಂದು ಸಚಿವರು ಭರವಸೆ ನೀಡಿದರು.

error: Content is protected !!