
ಮಂಗಳೂರು: ಸುರತ್ಕಲ್ ನಲ್ಲಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 25 ಮಂದಿ ಗಾಯ, 14 ಶಾಲಾ ಮಕ್ಕಳು ಸೇರಿದ್ದಾರೆ
ಮಂಗಳೂರು: ಸುರತ್ಕಲ್ ನಲ್ಲಿ ಎರಡು ಖಾಸಗಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರು ಹಾಗೂ 14 ಶಾಲಾ ಮಕ್ಕಳು ಸೇರಿ 25 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಸುರತ್ಕಲ್ ನಿಂದ ಚೆಲ್ಯಾರು ಕಡೆಗೆ ಸಾಗುತ್ತಿದ್ದ ಬಸ್ಸಿಗೆ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಬಸ್ಸು ನೇರವಾಗಿ ಢಿಕ್ಕಿ ಹೊಡೆದಿದೆ. ಚಾಲಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಒಟ್ಟು 41 ಜನರು ಗಾಯಗೊಂಡಿದ್ದು, ಅವರಲ್ಲಿ 4 ಮಂದಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರ ಪೈಕಿ 14 ಜನ ಶಾಲಾ ಮಕ್ಕಳು ಇದ್ದಾರೆ.
ಘಟನೆ ಸಂಭವಿಸಿದ ತಕ್ಷಣವೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.