
ಸುಬ್ರಹ್ಮಣ್ಯ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ಗೌಡ ಅವರು ನಾಪತ್ತೆಯಾಗಿದ್ದು, ಇದು ನಾಲ್ಕನೇ ದಿನ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯದಲ್ಲಿ ಇಂದು (ಜುಲೈ 25) ಅವರ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಶೋಧ ಕಾರ್ಯದಲ್ಲಿ ಎಸ್.ಡಿ.ಆರ್.ಎಫ್, ಮಲ್ಪೆ ಈಶ್ವರ ತಂಡ, ಅಗ್ನಿ ಶಾಮಕ ದಳ, ಅಂಬ್ಯುಲೆನ್ಸ್ ಚಾಲಕರ ಮಾಲಕರ ಸಂಘ ಹಾಗೂ ಸ್ಥಳೀಯರು ತೊಡಗಿದ್ದರು. ಕೊನೆಗೆ ಇಂದು, ಕುಮಾರಧಾರ ಸೇತುವೆಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಶೋಧ ಕಾರ್ಯಾಚರಣೆಗೆ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ್ದವು.