
ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಕೆಲ ಬಿಜೆಪಿ ಕಾರ್ಯಕರ್ತೆಯರು ಕಪ್ಪುಬಟ್ಟೆ ತೋರಿಸಿ ಗದ್ದಲಕ್ಕೆ ಕಾರಣರಾದರು. ಇದರಿಂದ ಸಿಎಂ ಸಿದ್ದರಾಮಯ್ಯ ವೇದಿಕೆಯಿಂದಲೇ ಎಸ್ಪಿಯವರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಇತರ ಸಚಿವರೂ ಹಾಜರಿದ್ದರು.
ಭಾಷಣ ನಡೆಯುತ್ತಿದ್ದಾಗ, ಬಿಜೆಪಿಯ ಮಹಿಳಾ ಕಾರ್ಯಕರ್ತರು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಇದರಿಂದ ಗೊಂದಲ ಸೃಷ್ಟಿಯಾಗಿ ಕೆಲವು ಕ್ಷಣಗಳಿಗೆ ಭಾಷಣ ಸ್ಥಗಿತಗೊಂಡಿತು. ಈ ಹಿನ್ನಲೆಯಲ್ಲಿ ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿಯನ್ನು ಸಿದ್ದರಾಮಯ್ಯ ವೇದಿಕೆಗೆ ಕರೆಸಿ ತೀವ್ರವಾಗಿ ಪ್ರಶ್ನಿಸಿದರು ಮತ್ತು “ಯಾರು ಬೆಳಗಾವಿ ಎಸ್ಪಿ?” ಎಂದು ಆಕ್ರೋಶಿಸಿದರು.
ಪೊಲೀಸರು ವಶಕ್ಕೆ ಪಡೆದ ಕಾರ್ಯಕರ್ತೆಯರನ್ನು ಕರೆದುಕೊಂಡು ಹೋಗುವಾಗ, ಪೊಲೀಸರು ಬಳಸುತ್ತಿದ್ದ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.