
ವಿದ್ಯಾರ್ಥಿ ಜೀವನದಲ್ಲಿ ಗುರಿಯೊಂದಿಗೆ ಪರಿಶ್ರಮಪೂರ್ವಕವಾಗಿ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ಕೆಲವು ಬ್ರಾಹ್ಮಣ ಹಾಗೂ ಇತರ ಹಿಂದೂ ಸಮುದಾಯದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಧಾರ್ಮಿಕ ಗುರುತುಗಳಾದ ಜನಿವಾರ ಇತ್ಯಾದಿ ಧರಿಸಲು ಅವಕಾಶ ನೀಡದೇ, ಅವುಗಳನ್ನು ತೆಗೆಸಿದ ಘಟನೆಯು ವಿವಾದಕ್ಕೀಡಾಗಿದೆ.
ಈ ಕುರಿತು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿನ ಕೆಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಗುರುತುಗಳ ಬಗ್ಗೆ ತಪಾಸಣೆ ನಡೆಸಿ, ಜನಿವಾರ ತೆಗೆಸುವಂತೆ ಹೇಳಿರುವುದು ದುಃಖದ ಸಂಗತಿಯಾಗಿದೆ,” ಎಂದಿದ್ದಾರೆ.
ಅವರು ಮುಂದುವರೆದು, “ಇದು ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತದ್ದಾಗಿದ್ದು, ಪರೋಕ್ಷವಾಗಿ ಹಿಂದೂ ಸಮುದಾಯವನ್ನು ಟೀಕಿಸುವ ನಿಲುವಾಗಿ ಕಾಣಿಸುತ್ತಿದೆ. ಹಿಜಾಬ್ ಮತ್ತು ಬುರ್ಕಾ ಧರಿಸಲು ಅವಕಾಶವಿರುವಾಗ, ಹಿಂದೂ ಸಂಪ್ರದಾಯದ ಭಾಗವಾದ ಜನಿವಾರ ಅಥವಾ ಮಂಗಳಸೂತ್ರ ಧರಿಸಲು ಅವಕಾಶವಿಲ್ಲದಿರುವುದು ತಾರತಮ್ಯಪೂರ್ಣ ಕ್ರಮ,” ಎಂದು ಆರೋಪಿಸಿದ್ದಾರೆ.
ಪರೀಕ್ಷಾ ಕೇಂದ್ರದ ಕೆಲ ಸಿಬ್ಬಂದಿಯು ಬ್ರಾಹ್ಮಣ ವಿದ್ಯಾರ್ಥಿಗಳ ಕೈಯಲ್ಲಿ ಇದ್ದ ಕಾಕಿದಾರ ಅಥವಾ ಗಾಯತ್ರಿ ದೀಕ್ಷೆಯುಳ್ಳ ಜನಿವಾರವನ್ನು ತೆಗೆಸಿರುವುದು ಘೋರ ಅವಮಾನವಾಗಿದ್ದು, ಈ ಕುರಿತು ಸರ್ಕಾರ ಕ್ಷಮೆ ಯಾಚಿಸಬೇಕು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ.