
ಮೂಲ್ಕಿ: ಕಾರು ಡಿಕ್ಕಿಯಿಂದ ಯುವತಿ ಸ್ಥಳದಲ್ಲೇ ಸಾವು
ಮೂಲ್ಕಿ ಸಮೀಪದ ಪಾವಂಜೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಯುವತಿ ಶ್ರುತಿ ಆಚಾರ್ಯ (27) ಸ್ಥಳದಲ್ಲೇ ಸಾವಿಗೀಡಾದರು.
ಅಪಘಾತದಲ್ಲಿ ಶ್ರುತಿ ಅವರ ತಂದೆ ಗೋಪಾಲ್ ಆಚಾರ್ಯ ಮತ್ತು ಪಕ್ಕದಲ್ಲಿದ್ದ ಕೈರುನ್ನಿಸಾ (52) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಗ್ರಕುಲೂರು ನಿವಾಸಿಯಾದ ಶ್ರುತಿ ಆಚಾರ್ಯ ಭಾರಿ ಮಳೆಯ ನಡುವೆ ತನ್ನ ತಂದೆ ಗೋಪಾಲ್ ಆಚಾರ್ಯ (53) ಅವರೊಂದಿಗೆ ಸ್ಕೂಟರ್ ನಿಲ್ಲಿಸಿ ರೈನ್‌ಕೋಟ್ ಧರಿಸುತ್ತಿದ್ದರು. ಈ ವೇಳೆ ಉಡುಪಿಯಿಂದ ಮಂಗಳೂರಿಗೆ ವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಬಿದ್ದಿದ್ದು, ಪರಿಣಾಮ ಶ್ರುತಿ ಸ್ಥಳದಲ್ಲೇ ಮೃತರಾದರು.
ಚೆನ್ನೈನಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಶ್ರುತಿ, ಸುಮಾರು 15 ದಿನಗಳ ಹಿಂದೆ ತಮ್ಮ ಸಹೋದರರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಊರಿಗೆ ಬಂದಿದ್ದರು. ಅಪಘಾತದ ದಿನ ಅವರು ಕಿನ್ನಿಗೋಳಿಯ ಬ್ಯಾಂಕ್‌ಗೆ ಹೋಗಿ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.