
ಈಗಿನ ಕಾಲದಲ್ಲಿ ಸಲಿಂಗ ಪ್ರೇಮವನ್ನು ತಪ್ಪಾಗಿ ಪರಿಗಣಿಸುವಂತಿಲ್ಲ. ಆದರೆ, ಇದು ನೈತಿಕತೆಯ ಹದ ಮೀರಬಾರದು ಎಂಬ ಅಭಿಪ್ರಾಯವನ್ನು ಕೆಲವರು ಹೊಂದಿದ್ದಾರೆ. ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಈ ಸಂಬಂಧಿಸಿದ ಅಪರೂಪದ ಘಟನೆ ಒಂದು ವರದಿಯಾಗಿದೆ.
ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮುಘಲ್‌ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಿಭಿನ್ನ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಎರಡು ಬೇರೆ ಜಾತಿಯ ಹುಡುಗಿಯರು ಪರಸ್ಪರ ಪ್ರೀತಿಸಿ ವಿವಾಹವಾಗಿರುವುದು ತಿಳಿದುಬಂದಿದೆ. ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಹುಡುಗಿಯರು, ಪೋಷಕರ ಭಯದಿಂದ ಮನೆಯಿಂದ ಓಡಿ, ಉಜ್ಜಯಿನಿಯಲ್ಲಿ ಮದುವೆಯಾಗಿದ್ದಾರೆ.
ಈ ಇಬ್ಬರು ಹುಡುಗಿಯರು ಕಾಣೆಯಾಗಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಪೊಲೀಸರು ಅವರನ್ನು ಹುಡುಕಲು ಕಾರ್ಯಾರಂಭಿಸಿದರು. ಉಜ್ಜಯಿನಿಯಲ್ಲಿ ಪತ್ತೆಯಾದ ಹುಡುಗಿಯರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತರಿದರು. ವಿಚಾರಣೆ ನಡೆಸಿದ ನಂತರ, ಅವರನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದರು.
ಮೂಲಗಳ ಪ್ರಕಾರ, ಮುಘಲ್‌ಸರಾಯ್ ಕೊತ್ವಾಲಿ ಪ್ರದೇಶದ ಈ ಹಳ್ಳಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದ ಈ ಇಬ್ಬರು ಹುಡುಗಿಯರು ಪರಿಚಯದಿಂದ ಸ್ನೇಹಿತರಾಗಿದ್ದರು. ಈ ಸ್ನೇಹ ಕಾಲಕಾಲಕ್ಕೆ ಆಕರ್ಷಣೆಗೆ ತಿರುಗಿ, ಅಂತಿಮವಾಗಿ ಪ್ರೀತಿಯ ಸಂಬಂಧವಾಗಿ ವಿಕಸಿತಗೊಂಡಿತು. ಮನೆಯವರ ಅನುಮಾನಕ್ಕೆ ಸಿಲುಕದೆ, ಇಬ್ಬರೂ ಅನೇಕ ಬಾರಿ ಒಟ್ಟಿಗೆ ಸಮಯ ಕಳೆಯುತ್ತಿದ್ದರು.
ಅವರು ಒಟ್ಟಿಗೆ ಹೆಚ್ಚು ಕಾಲ ಕಳೆದರೂ, ಕುಟುಂಬದವರಿಗೆ ಅವರ ಸಂಬಂಧದ ಬಗ್ಗೆ ಯಾವುದೇ ಅನುಮಾನ ಮೂಡಲಿಲ್ಲ. ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದ ಈ ಸಂಬಂಧವನ್ನು ಯಾರೂ ಕಂಡುಕೊಳ್ಳದೆ ಇದ್ದರೂ, ಒಂದು ವಾರದ ಹಿಂದೆ ಅವರು ಮನೆಯಿಂದ ನಾಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಉಂಟಾಯಿತು.
ಕುಟುಂಬದವರು ಈ ಬಗ್ಗೆ ಮುಘಲ್‌ಸರಾಯ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಪೊಲೀಸರು ತನಿಖೆ ನಡೆಸಿ, ಮೊಬೈಲ್ ನೆಟ್‌ವರ್ಕ್ ಆಧರಿಸಿ ಉಜ್ಜಯಿನಿಯಲ್ಲಿ ಅವರಿರುವ ಸ್ಥಳವನ್ನು ಪತ್ತೆಹಚ್ಚಿದರು. ಪೊಲೀಸರು ಕುಟುಂಬ ಸದಸ್ಯರೊಂದಿಗೆ ಉಜ್ಜಯಿನಿಗೆ ತೆರಳಿ, ಹುಡುಗಿಯರು ಮದುವೆಯಾದ ವಿಚಾರ ತಿಳಿದುಬಂದಿತು. ನಂತರ, ಅವರನ್ನು ವಶಕ್ಕೆ ಪಡೆದು ಅವರ ಊರಿಗೆ ಹಿಂದಿರುಗಿಸಲಾಯಿತು.