
ಬೆಳಗ್ಗಿನ ವೇಳೆಯಲ್ಲಿ ಕಿರುತೆರೆ ನಟಿಗೆ ಗಂಡನಿಂದ ಚಾಕು ಇರಿತ: ಕೊಲೆ ಯತ್ನದ ಪ್ರಕರಣ
ಬೆಂಗಳೂರು: ಕಿರುತೆರೆ ನಟಿ ಮತ್ತು ಖಾಸಗಿ ವಾಹಿನಿಯ ನಿರೂಪಕಿಯಾಗಿರುವ ಮಂಜುಳಾ ಅಲಿಯಾಸ್ ಶ್ರುತಿ ಮೇಲೆ ಅವರ ಗಂಡ ಅಮರೇಶ್ ಎಚ್‌ಎಸ್ ಚಾಕು ಇರಿಸಿ ಕೊಲೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಕನ್ನಡದಲ್ಲಿ ‘ಅಮೃತಧಾರೆ’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಶ್ರುತಿ, ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನ ಲೀಸ್ ಮನೆೊಂದರಲ್ಲಿ ವಾಸಿಸುತ್ತಿದ್ದರು. ಜುಲೈ 4 ರಂದು ಈ ದಾಳಿ ನಡೆದಿದ್ದರೂ ಘಟನೆ ಇದೀಗ ಬಹಿರಂಗವಾಗಿದೆ.
ಶ್ರುತಿ ಮತ್ತು ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿಯಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಇದ್ದರು. ಆದರೆ, ಕಳೆದ ಕೆಲವು ತಿಂಗಳಿಂದ ಶ್ರುತಿ ನಡವಳಿಕೆಯನ್ನು ಗಂಡನಿಗೆ ಇಷ್ಟವಾಗದ ಕಾರಣ ದಂಪತಿಗಳ ನಡುವೆ ಅಸಮಾಧಾನ ಏರ್ಪಟ್ಟಿತ್ತು. ಈ ಹಿನ್ನೆಲೆ ಶ್ರುತಿ ತಮ್ಮ ಅಣ್ಣನ ಮನೆಯಲ್ಲೇ ವಾಸವಿದ್ದರು.
ಕಳೆದ ಏಪ್ರಿಲ್‌ನಲ್ಲಿ ಶ್ರುತಿ ಗಂಡನಿಂದ ದೂರವಾಗಿದ್ದರೂ, ಜುಲೈ ಮೊದಲ ವಾರದಲ್ಲಿ ಗಂಡ-ಹೆಂಡತಿ ಮಧ್ಯೆ ರಾಜಿ ನಡೆದಿತ್ತು. ಆದರೆ, ಅವರೇ ಒಂದಾದ ಬೆಳ್ಳಂಬೆಳಗ್ಗೆ ಆಕ್ರೋಶಿತ ಗಂಡ ಅಮರೇಶ್ ಪತ್ನಿಗೆ ಪೆಪ್ಪರ್ ಸ್ಪ್ರೇ ಎರಚಿ, ಪಕ್ಕೆಲುಬು, ತೊಡೆ ಮತ್ತು ಕುತ್ತಿಗೆಗೆ ಚಾಕು ಇರಿದು ಹಲ್ಲೆ ನಡೆಸಿದ್ದಾನೆ.
ಘಟನೆ ಸಂಬಂಧ ಶ್ರುತಿ ನೀಡಿದ ದೂರಿನ ಆಧಾರದಲ್ಲಿ ಹನುಮಂತ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.