
ಶಂಕರನಾರಾಯಣ: ಉಡುಪಿ ಜಿಲ್ಲೆಯ ಕುಂದಾಪುರದ ಸಮೀಪವಿರುವ ಕಮಲಶೀಲೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಹಳ್ಳಿಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸುಳುಗೋಡು) ಯ ಮುಖ್ಯಶಿಕ್ಷಕರಾದ ಕುಬೇರ (49) ಎಂದು ಗುರುತಿಸಲಾಗಿದೆ.
ಪತ್ನಿ ಸುಮಿತಾ ನೀಡಿದ ದೂರಿನಂತೆ, ಕುಬೇರ ಅವರು ತಮ್ಮ ಸೇವೆ ಸಲ್ಲಿಸುತ್ತಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 60ಕ್ಕಿಂತ ಕಡಿಮೆ (53) ಇರುವುದರಿಂದ ವರ್ಗಾವಣೆ ಆಗಬಹುದೆಂಬ ಆತಂಕದಲ್ಲಿದ್ದರೆಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ಅವರು ಕಳೆದ ಒಂದು ತಿಂಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು.
ಜುಲೈ 7ರಂದು ಬೆಳಗ್ಗೆ ಶಾಲೆಗೆ ಹೋದ ಕುಬೇರ ಅವರು, ಮಧ್ಯಾಹ್ನದ ಹೊತ್ತಿಗೆ ಕಮಲಶೀಲೆಯ ಪಾರೆ ಪ್ರದೇಶದಲ್ಲಿ ಹುಣಗಲ್ ಮರಕ್ಕೆ ಹಳದಿ ಬಣ್ಣದ ನೈಲಾನ್ ಹಗ್ಗ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು. ಇದುವೇಳೆ, ವಿಷಯ ತಿಳಿದ ಪತ್ನಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ಅವರನ್ನು ಕೆಳಗೆ ಇಳಿಸಿ ತಕ್ಷಣ ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ವೈದ್ಯರು ಮಧ್ಯಾಹ್ನ 1 ಗಂಟೆಗೆ ಅವರನ್ನು ಮೃತ ಎಂದು ಘೋಷಿಸಿದರು.
ಆತ್ಮಹತ್ಯೆಗೆ ಸ್ಥಳೀಯ ವರ್ಗಾವಣೆ ಭಯವೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ BNSS ಕಲಂ 194 ಅಡಿಯಲ್ಲಿ ಪ್ರಕರಣ (UDR No.24/2025) ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.