
ಉಡುಪಿ ಜಿಲ್ಲೆಯ ಕೋಡಿ ಸೇತುವೆ ಬಳಿ ಕುಂದಾಪುರ ವಿಠ್ಠಲವಾಡಿ ನಿವಾಸಿ 33 ವರ್ಷದ ಹೀನಾ ಕೌಶರ್ ಎಂಬ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸೋಮವಾರ ಬೆಳಿಗ್ಗೆ ಸುಮಾರು 4 ಗಂಟೆಯ ವೇಳೆ ಕೋಡಿ ಸೇತುವೆ ಬಳಿ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬದ ಸದಸ್ಯರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೀನಾ ಕೌಶರ್ ಪತಿ ವಿದೇಶದಲ್ಲಿದ್ದು, ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಗೆ ವಾಸವಾಗಿದ್ದರು. ಸೋಮವಾರ ಬೆಳಗ್ಗೆ ಮನೆಬಿಟ್ಟ ಮಹಿಳೆ ಪುನಃ ವಾಪಸ್ ಬಾರದೇ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದರು. ಅವರ ಚಪ್ಪಲಿ ಮತ್ತು ಸ್ಕೂಟರ್ ಸೇತುವೆ ಬಳಿ ಕಂಡುಬಂದಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.