
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೆಲಿಂಜದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಚಾಲಕ ಸಾವನ್ನಪ್ಪಿದ್ದಾನೆ. ಅವನ ಸಹೋದರಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅನಂತಾಡಿ ಆಶ್ವತ್ತಡಿ ಮೂಲದ 34 ವರ್ಷದ ಅನೀಶ್ ಎಂದು ಗುರುತಿಸಲಾಗಿದೆ.

ವಿಟ್ಲದಿಂದ ಕಲ್ಲಡ್ಕದ ಕಡೆಗೆ ಸಾಗುತ್ತಿದ್ದ ಮಿನಿ ಟಿಪ್ಪರ್, ಎದುರಿನಿಂದ ಬರುತ್ತಿದ್ದ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನೀಶ್, ಅವರ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡರು.
ಗಾಯಾಳುಗಳನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಅನೀಶ್ ಸೋಮವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
