
ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಭದ್ರತೆ ಮತ್ತು ಎಚ್ಚರಿಕೆ ಸನ್ನಿವೇಶ ನಿರ್ಮಾಣವಾಗಿದೆ. ಈ ಹೊತ್ತಿನಲ್ಲಿ, ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬರು ಪಾಕಿಸ್ತಾನ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಕಿಡಿಗೇಡಿತನಕ್ಕೆ ಎಳೆಯಾಗಿದೆ.
ತಷಾವುದ್ದ ಫಾರೂಖಿ ಶೇಖ್ ಎಂಬ ವಿದ್ಯಾರ್ಥಿನಿ ತನ್ನ ‘@hoodyyyyyyy’ ಎಂಬ ಖಾತೆ ಮೂಲಕ ಪಾಕಿಸ್ತಾನದ ಜನರ ಸುರಕ್ಷತೆ ಕುರಿತು ಹಾಗೂ ಗಡಿಭಾಗದಲ್ಲಿ ಹೋಗಬಾರದೆಂದು ಸಲಹೆ ನೀಡುವ ರೀತಿಯ ಸಂದೇಶ ಹಂಚಿಕೊಂಡಿದ್ದರು. “ನನ್ನ ಪಾಕಿಸ್ತಾನಿ ಸ್ನೇಹಿತರೆ, ಐಒಜೆಕೆ ಹಾಗೂ ಎಜೆಕೆ ಪ್ರದೇಶದವರು ಸರ್ಕಾರಿ ಅಥವಾ ಸೈನಿಕ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ 200 ಕಿಮೀ ದೂರವಿರುವಂತೆ ಇರಲಿ. ಅಲ್ಲಾ ಪಾಕಿಸ್ತಾನ ಮತ್ತು ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ” ಎಂಬ ತೀವ್ರ ವಿವಾದಾತ್ಮಕವಾದ ಶೀರ್ಷಿಕೆ ಒಳಗೊಂಡ ಪೋಸ್ಟ್‌ವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಅವರು ವಾಟ್ಸಾಪ್ ಸ್ಟೇಟಸ್‌ಗೂ ಹಾಕಿದ್ದಾಗಿ ವರದಿಯಾಗಿದೆ.
ಈ ವಿಷಯ ಸ್ಥಳೀಯ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರಿಂದ ವಿದ್ಯಾರ್ಥಿನಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭಾರತೀಯ ದಂಡ ಸಂಹಿತೆಯ (BNS) ಸೆಕ್ಷನ್ 152 ಮತ್ತು 197.3(5) ಅಡಿಯಲ್ಲಿ ದೇಶದ್ರೋಹದ ನಿಟ್ಟಿನಲ್ಲಿ FIR ದಾಖಲಿಸಿದ್ದಾರೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ, ತಷಾವುದ್ದ ಮಾಧ್ಯಮದ ಮುಂದೆ ಕ್ಷಮೆಯಾಚನೆ ಮಾಡುತ್ತಾ, “ನನ್ನಿಂದ ತಪ್ಪು ಆಗಿದೆ. ನಾನು ಭಾರತದ ಪ್ರಜೆ. ನನ್ನ ದೇಶವನ್ನು ಪ್ರೀತಿಸುತ್ತೇನೆ. ನಾನು ಮಾಡಿದ ಟಿಪ್ಪಣಿಯು ಅಜ್ಞಾನದ ಪ್ರತಿಫಲವಾಗಿದೆ. ಮತ್ತೆಂದೂ ಈ ರೀತಿಯ ತಪ್ಪು ಮಾಡುವುದಿಲ್ಲ,” ಎಂದು ಹೇಳಿ ಕ್ಷಮೆ ಕೇಳಿದ್ದಾಳೆ.
ಸದ್ಯ, ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದು, ವಿದ್ಯಾರ್ಥಿನಿಯ ವಿರುದ್ಧ ಕಾನೂನು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.