
ಆಂಧ್ರಪ್ರದೇಶ: ಲಾರಿ ಮತ್ತು ಇನ್ನೋವಾ ನಡುವೆ ಭೀಕರ ಅಪಘಾತ – ಆರು ಮಂದಿ ದುರ್ಮರಣ, ಓರ್ವ ಗಂಭೀರ ಗಾಯ
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ, ಕೊಮರೋಲು ಮಂಡಲದ ತತಿಚೆರ್ಲಮೋಟು ಬಳಿ ಲಾರಿ ಮತ್ತು ಇನ್ನೋವಾ ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಗೆ ತೀವ್ರ ಗಾಯವಾಗಿದೆ.
ಮಹಾನಂದಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ 8 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇನ್ನೋವಾ ಕಾರು ಅತಿವೇಗದಿಂದ ಬರುತ್ತಿದ್ದ ವೇಳೆ ಎದುರು ಮುಖದಿಂದ ಬಂದ ಲಾರಿಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸಂಪೂರ್ಣ ನಜ್ಜುಗುಜ್ಜಾದ ಕಾರಿನೊಳಗೆ ಸಿಲುಕಿದ್ದ ಶವಗಳನ್ನು ಹೊರತೆಗೆದರು. ಮೃತಪಟ್ಟವರನ್ನು ಭವಾನಿ, ನರಸಿಂಹನ್, ಬಬ್ಲು, ದಿವಾಕರ್, ಸನ್ನಿ ಮತ್ತು ಅಮ್ಕಾಲು ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಪರಿಶೀಲನೆ ಹಾಗೂ ತನಿಖೆ ಮುಂದುವರೆಸಿದ್ದಾರೆ.