
ಶ್ರೀ ಬೊಬ್ಬರ್ಯ ಕ್ಷೇತ್ರ ಬೆಳ್ಳಳೆಯಲ್ಲಿ ನಿನ್ನೆ ನಡೆದ ಹಸಿರು ಹೊರೆಕಾಣಿಕೆ ಮೆರವಣಿಗೆ ಭಕ್ತರನ್ನು ಆಕರ್ಷಿಸಿತು. ಈ ಅದ್ಧೂರಿ ಮೆರವಣಿಗೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಪಂಚಾಯತ್ ರಸ್ತೆ, ಗರಡಿಮಜಲು, ಕೊಡವೂರು 3 ರಸ್ತೆ, ಲಕ್ಷ್ಮೀನಗರ ಮಾರ್ಗವಾಗಿ ಶ್ರೀ ಬೊಬ್ಬರ್ಯ ಕ್ಷೇತ್ರವನ್ನು ಪ್ರವೇಶಿಸಿತು.
ಮೆರವಣಿಗೆಯಲ್ಲಿ ಹಲವಾರು ವೈಶಿಷ್ಟ್ಯಗಳು ಗಮನ ಸೆಳೆದವು. ಡೋಲು, ಕೊಂಬು, ನಾಸಿಕ್ ಬ್ಯಾಂಡ್, ಕೇರಳ ಚೆಂಡೆ, ಮತ್ತು ವಿವಿಧ ವಾದ್ಯಗಳು ಸಂಭ್ರಮ ಹೆಚ್ಚಿಸಿವೆ. ಕಂಬಳದ ಎತ್ತುಗಳು ಮೆರವಣಿಗೆಯು ವಿಶೇಷ ಆಕರ್ಷಣೆಯಾಗಿದ್ದರೆ, ತಾಲೀಮ್ ತಂಡ ಹಾಗೂ ಬಾಡಿ ಬಿಲ್ಡರ್ ಮ್ಯಾನ್ ಅವರ ಪ್ರಭಾವೀ ಪ್ರದರ್ಶನ ಭಕ್ತರಲ್ಲಿ ಉತ್ಸಾಹ ತುಂಬಿತು.
ಮಹಿಳೆಯರು 500ಕ್ಕೂ ಹೆಚ್ಚು ಕಳಸ ಹಿಡಿದು ಭಾಗವಹಿಸಿದ್ದು, ಇದು ಭಕ್ತಿಪೂರ್ಣ ವಾತಾವರಣವನ್ನು ಮೂಡಿಸಿತು. ಕುಣಿತ ಭಜನೆ ತಂಡಗಳ ಉತ್ಸಾಹಭರಿತ ನೃತ್ಯ ಎಲ್ಲರನ್ನೂ ರಂಜಿಸಿತು. ಹುಲಿ ವೇಷಧಾರಿಗಳು ಹಾಗೂ ಅದ್ದೂರಿ ಟ್ಯಾಬ್ಲೋಗಳು ಮೆರವಣಿಗೆಗೆ ಸೊಬಗು ತಂದವು. ವಿಶೇಷವಾಗಿ, ಅಘೋರಿ, ಲಕ್ಷ್ಮೀ-ಸರಸ್ವತಿ, ಆದಿಯೋಗಿ, ಭಂಡಾರ ಮನೆ, ಭಜನೆ, ಮತ್ತು ಗೊಂಬೆ ಕುಣಿತ ಟ್ಯಾಬ್ಲೋಗಳು ಭಕ್ತರ ಗಮನ ಸೆಳೆದವು.
ಈ ಸಾಂಸ್ಕೃತಿಕ ಮೆರವಣಿಗೆಯು ಭಾಗವಹಿಸಿದ ಭಕ್ತರ ಉತ್ಸಾಹ ಮತ್ತು ಭಕ್ತಿಭಾವವನ್ನು ಸ್ಪಷ್ಟಪಡಿಸಿದ್ದು, ಭಕ್ತರ ಸಾಮೂಹಿಕ ಒಗ್ಗಟ್ಟಿನ ಪ್ರತಿರೂಪವಾಯಿತು.








